ಸ್ಟೇಟಸ್ ಕತೆಗಳು (ಭಾಗ ೮೫೨)- ಅರ್ಥವೇನು?
ನಾನು ಪ್ರತಿ ಸಲವೂ ಏನೇ ಕೆಲಸ ಮಾಡಲಿ ಅವರು ಅದಕ್ಕೆ ಕೊಂಕು ಮಾತನಾಡುತ್ತಾರೆ. ನನ್ನ ಕೆಲಸ ಎಷ್ಟೇ ಸರಿಯಾಗಿದ್ರೂ ಯಾರಿಗೇ ಉಪಯೋಗ ಆಗ್ತಾಯಿದ್ರು ಕೂಡ ಅದರಲ್ಲಿ ತಪ್ಪು ಕಂಡಿಹಿಡಿಯುತ್ತಾರೆ. ಅವರು ಮಾಡಿದ್ದೆ ಸರಿ ಎಂದುಕೊಳ್ಳುತ್ತಾರೆ. ನಾನು ಮಾಡಿದ ಕೆಲಸವನ್ನ ಎಲ್ಲರಿಗೂ ತಪ್ಪು ಎಂದು ಸಾಧಿಸಿ ನನ್ನನ್ನ ಮತ್ತು ನನ್ನ ಕೆಲಸವನ್ನು ಮರೆಮಾಚುತ್ತಾರೆ. ಒಟ್ಟಿನಲ್ಲಿ ನಾನು ಸರಿಯಾಗಿ ಎಲ್ಲರ ಮುಂದೆ ಕಾಣಿಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲ. ಇದಕ್ಕೆ ಏನು ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ ಅಂತ ತುಂಬ ನೋವಿನಿಂದ ನನಗೆ ತಿಳಿದ ದೊಡ್ಡವರೊಬ್ಬರ ಬಳಿ ಮಾತನಾಡಿದೆ.
ಅದಕ್ಕೆ ಅವರು "ನಾನು ಹೊಸತೊಂದು ಚಪ್ಪಲಿ ತೆಗೆದುಕೊಂಡಿದ್ದೇನೆ. ಆ ಚಪ್ಪಲಿಯನ್ನು ಧರಿಸಿಕೊಂಡು ಶಾಲೆಗೂ, ಕಾಲೇಜಿಗೂ ಅಂಗಡಿಗೂ ಹೀಗೆ ಎಲ್ಲಾ ಕಡೆ ಓಡಾಡ್ತೇನೆ. ದಾರಿಯಲ್ಲಿ ಹೋಗುವಾಗ ದೂಳು ಬಂದು ಚಪ್ಪಲಿಯ ಮೇಲೆ ಅಂಟಿಕೊಳ್ಳುತ್ತವೆ. ಮತ್ತೆ ಮರುದಿನಕ್ಕೆ ನನ್ನ ಚಪ್ಪಲಿ ಸ್ವಚ್ಛ ಆಗಬೇಕು. ಸ್ವಚ್ಛ ಆಗಬೇಕಾದರೆ ನಾನು ಚಪ್ಪಲಿಯನ್ನ ತೊಳೆಯಲೇಬೇಕು. ಮತ್ತೆ ಚಪ್ಪಲಿಯನ್ನ ಸ್ವಚ್ಛ ಮಾಡಿಕೊಂಡು ಮರುದಿನ ರಸ್ತೆಗೆ ಇಳಿದರೆ ಮತ್ತೆ ಧೂಳು ಅಂಟಿಕೊಂಡು ಬಿಡುತ್ತೆ. ಈ ಕಾರಣಕ್ಕೆ ಈ ರಸ್ತೆಯನ್ನು ಸರಿ ಮಾಡಬೇಕು, ಧೂಳು ಹಾರುವುದನ್ನ ನಿಲ್ಲಿಸುವುದಕ್ಕೆ ಏನಾದರೂ ಪ್ರಯತ್ನಪಡಬೇಕು ಅನ್ನುವ ವ್ಯರ್ಥ ಹೋರಾಟ ಯಾಕೆ? ಪ್ರತಿದಿನವೂ ಚಪ್ಪಲಿಯನ್ನ ಸ್ವಚ್ಛ ಮಾಡಿಕೊಂಡು ನನ್ನ ಕೆಲಸವನ್ನು ನಾನು ಮಾಡ್ತಾ ಇರಬೇಕು. ನನ್ನ ಚಪ್ಪಲಿ ನನ್ನ ಬಳಿ ಹಾಗೆ ಇರುತ್ತೆ ಮತ್ತು ಚಪ್ಪಲಿ ತನ್ನ ಮೂಲ ಸತ್ವವನ್ನ ಹಾಗೆ ಉಳಿಸಿಕೊಂಡು ಬಿಡುತ್ತೆ ಕೂಡ. ಸರಿನಾ... ಎಂದು ಹೊರಟೆ ಬಿಟ್ರು. ನನಗೆ ಅವರ ಮಾತನ್ನು ಹೇಗೆ ತೆಗೆದುಕೊಳ್ಳಬೇಕು ಅಂತಾನೇ ಅರ್ಥ ಆಗ್ಲಿಲ್ಲ. ಹಾಗಾಗಿ ನಿಮ್ಮ ಮುಂದೆ ಬಂದಿದ್ದೇನೆ ನಿಮಗೇನನ್ನಿಸ್ತು ಅದನ್ನ ದಯವಿಟ್ಟು ನನಗೆ ಅರ್ಥೈಸಿ ಹೇಳಿ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ