ಸ್ಟೇಟಸ್ ಕತೆಗಳು (ಭಾಗ ೮೫೩)- ಆಕೆಯ ನೋವು

ಸ್ಟೇಟಸ್ ಕತೆಗಳು (ಭಾಗ ೮೫೩)- ಆಕೆಯ ನೋವು

ಅವಳು ತುಂಬಾ ರೋಸಿ ಹೋಗಿದ್ದಾಳೆ. ಕುದ್ದು ಹೋಗಿದ್ದಾಳೆ ನೋವನ್ನ ಅನುಭವಿಸಿ ಅನುಭವಿಸಿ ಜಡ್ಡು ಕಟ್ಟಿದ್ದಾಳೆ. ವಯಸ್ಸು ತುಂಬಾ ಸಣ್ಣದು. ಆ ಸಮಯದಲ್ಲಿ ಮನೆಗೆ ಬರುವ ಪಕ್ಕದ ಮನೆಯ ಅಂಕಲ್ ವಿಪರೀತವಾಗಿ ಆಕೆಯನ್ನು ಮುದ್ದಿಸುತ್ತಿದ್ದರು. ಆಕೆ ಅದೆಷ್ಟೇ ಬೇಡ ಬೇಡ ಅಂದುಕೊಂಡರು ಕೂಡ ನೋಡಿದವರಿಗೆ ಅದ್ಯಾವುದೂ ತಪ್ಪು ಅಂತ ಕಾಣಲಿಲ್ಲ. ವಯಸ್ಸು ಹೆಚ್ಚಾಯ್ತು ಅವಳು ಹೋಗಿ ಬರುವ ದಾರಿಯಲ್ಲಿ ನೋಡುವ ಕಣ್ಣುಗಳು ಸಾಮಾನ್ಯವಾದ ಭಾವಗಳು ಅಲ್ಲಿ ಯಾವುದು ಕಾಣಲಿಲ್ಲ. ಅವಳನ್ನ ಮುಟ್ಟುತ್ತಿರುವ ಕೈಗಳ ಮನಸ್ಸುಗಳಲ್ಲಿ ಬೇರೆ ಯಾವುದೋ ಭಾವನೆ ಕಾಡ್ತಾ ಇತ್ತು. ಬಸ್ಸು ರಿಕ್ಷಾ ಹೀಗೆ ಊರಿಂದ ಊರಿಗೆ ಚಲಿಸುವಾಗ ಮೈಯನ್ನ ಮುಟ್ಟುತ ವಿಕೃತವಾಗಿ ವರ್ತಿಸುವ ಮನಸ್ಸುಗಳು ಅಲ್ಲಲ್ಲಿ ಕಾಣುವುದಕ್ಕೆ ಆರಂಭವಾದವು. ಆಕೆಗೆ ಎಲ್ಲಿ ತಾನು ಸುರಕ್ಷಿತವಾಗಿ ಇದ್ದೇನೋ ಇಲ್ಲವೋ ಅನ್ನುವ ಭಯ ಕಾಡುವುದ್ದಕ್ಕೆ ಪ್ರಾರಂಭವಾಯಿತು. ಶಾಲೆಯಲ್ಲಿ ಹೇಳ್ತಾ ಇದ್ರು ಹೆಣ್ಣನ್ನ ಪೂಜಿಸಬೇಕು ಗೌರವಿಸಬೇಕು ಪ್ರತಿಯೊಬ್ಬ ಮನೆಯ ಹೆಣ್ಣು ಮಗು ನಮ್ಮ ಅಕ್ಕ ತಂಗಿ ಎಂದು ಭಾವಿಸಬೇಕು ಅಂತ ಇದನ್ನ ಎಲ್ಲಾ ಮನೆಯಲ್ಲೂ ಎಲ್ಲರಿಗೂ ಹೇಳಿಕೊಟ್ಟಿರಬೇಕಲ್ವಾ? ಹಾಗೆ ವರ್ತಿಸುತ್ತಿರುವ ಅವನ ಮನಸ್ಸಿನಲ್ಲಿ ಅವನ ಮನೆಯ ತಂದೆ ತಾಯಿ ತಂಗಿಗೆ ಈ ತರಹದ ಪರಿಸ್ಥಿತಿ ಬರಬಹುದೆನ್ನುವ ಯೋಚನೆಯು ಬಂದಿರಲಿಲ್ವಾ? ಎಲ್ಲ ಪ್ರಶ್ನೆಗಳನ್ನ ಹಾಗೆ ಮನಸ್ಸಿನಲ್ಲಿ ಒತ್ತಿ ಇಟ್ಟುಕೊಂಡು ಆಕೆ ತುಂಬಾ ಜಾಗೃತೆಯಿಂದ ಈಗಲೂ ಸುತ್ತಲೂ ಕಣ್ಣಾಡಿಸುತ್ತಾ ಯಾರು ಹಿತವರು ಈ ಸುತ್ತ ಸೇರಿದವರು ಎಂದು ನೋಡಿ ಚಲಿಸುತ್ತಾಳೆ. ಯಾಕೆಂದರೆ ವಯಸ್ಸು ಹಿರಿತನ ಪ್ರೌಢಿಮೆ ಪದವಿ ಇದು ಯಾವುದು ವರ್ತನೆಯಿಂದ ಬರುತ್ತಿಲ್ಲವಲ್ಲ ಅನ್ನೋದು ಆಕೆಯ ವ್ಯಥೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ