ಸ್ಟೇಟಸ್ ಕತೆಗಳು (ಭಾಗ ೮೫೪)- ಚಿನ್ಮಯ ರೂಪ

ಸ್ಟೇಟಸ್ ಕತೆಗಳು (ಭಾಗ ೮೫೪)- ಚಿನ್ಮಯ ರೂಪ

ಶತ ಶತಮಾನಗಳ ಹಿಂದಿನಿಂದಲೂ ಕಾಲ ಗರ್ಭದ ಒಳಗೆ ಹುದುಗಿ ಹೋಗಿದ್ದ ಆ ಕಲ್ಲಿಗೆ ಮನಸ್ಸಿನೊಳಗೆ ಸಣ್ಣ ತಲ್ಲಣ. ತನ್ನ ಬದುಕಿನ ಅರ್ಥವೇನು ಈ ಭೂಮಿಯಲ್ಲಿ ನೆಲವನ್ನ ಗಟ್ಟಿಯಾಗಿ ಹಿಡಿದಿಡುವುದಕ್ಕೆ ಬಂದಿದ್ದೇನೆಯೇ? ನೆಲವನ್ನ ಇನ್ನಷ್ಟು ಗಟ್ಟಿಗೊಳಿಸುವುದ್ದಕ್ಕೆ ಜನಿಸಿದ್ದೇನೆಯೇ? ನನ್ನ ಹುಟ್ಟಿಗೆ ಕಾರಣವೇನು ಅನ್ನೋದನ್ನ ತುಂಬಾ ಸಮಯದಿಂದ ಯೋಚಿಸುತ್ತಿತ್ತು. ದೇವರು ಕಾಲ ಬರುತ್ತೆ ತಾಳು ಅನ್ನುವ ಉತ್ತರವನ್ನು ಬಿಟ್ಟು ಬೇರೆ ಏನನ್ನೂ ಹೇಳಲೇ ಇಲ್ಲ. ಭೂಮಿಯ ಕಂಪನಕ್ಕೂ ಏನೋ ನೆಲದಿಂದ ಸ್ವಲ್ಪ ಸ್ವಲ್ಪ ಮೇಲೆ ಬಂದ ಕಲ್ಲಿಗೆ ತನ್ನೊಳಗೆ ತಾಳಿಕೊಳ್ಳುವ ಶಕ್ತಿ ಹೆಚ್ಚು ಬೇಕು ಅನ್ನೋ ಕಾರಣಕ್ಕೆ ಎಲ್ಲ ನೋವುಗಳನ್ನು ಅದುಮಿ, ಮತ್ತೆ ಮತ್ತೆ ಗಟ್ಟಿಯಾಗಿ ಕತ್ತಲೊಳಗೆ ಮುಳುಗಿ ನಿಂತಿತ್ತು.  ಒಂದು ದಿನ ಕತ್ತಲೆಯೊಳಗಿದ್ದ ಕಲ್ಲು ಬೆಳಕಿನ ದರ್ಶನಕ್ಕೆ ಬಂತು. ಕೆಲವೇ ದಿನಗಳಲ್ಲಿ ಗಾಳಿ ಬೆಳಕಿನ ನಡುವೆ ತಾನಿದ್ದ ಊರನ್ನು ತೊರೆದು ಇನ್ನೊಂದು ಊರಿಗೆ ಸಾಗುವ ಸ್ಥಿತಿಯೂ ಬಂತು. ಕಾರಣವೇನೆಂದು ಅರ್ಥವಾಗಲಿಲ್ಲ ಅಲ್ಲಿ ತನ್ನನ್ನು ಬೇರೆ ಬೇರೆ ರೀತಿಯ ಪರೀಕ್ಷೆಗಳಿಗೆ ಕೂಡ ಒಡ್ಡಿದರು. ಇಷ್ಟು ದಿನ ತಾಳಿಕೊಂಡ ಶಕ್ತಿಯನ್ನು ಹಾಗೆ ಗಟ್ಟಿಯಾಗಿ ಹಿಡಿದು ದೇವರನ್ನು ಪ್ರಾರ್ಥಿಸಿತು ಕೂಡ. ನೋವು ಕಡಿಮೆಯಾಯಿತು ಅಂದುಕೊಳ್ಳುವಷ್ಟರಲ್ಲಿ ಇನ್ಯಾರೋ ಬಂದು ಉಳಿ ಸುತ್ತಿಗೆಗಳಿಂದ ಹಾಗೆಯೇ ಜೋರು ಜೋರಾಗಿ ಬಡಿಯೋದಕ್ಕೆ ಆರಂಭ ಮಾಡಿದರು. ಹಾಗೆಯೇ ತನ್ನ ಮೇಲಿದ್ದ ಎಲ್ಲ ಕಲ್ಮಶಗಳನ್ನ ದೂರಸರಿಸುತ್ತಾ ಒಳಗೆ ಅಡಗಿಸಿಕೊಂಡಿದ್ದ ಚಿನ್ಮಯ ರೂಪವೊಂದು ಹೊರಗೆ ಬಂತು. ಹಾಗೆಯೇ ಒಂದು ಕಡೆ ನಿಲ್ಲಿಸಲಾಯಿತು ಕೂಡ. ಇಷ್ಟು ದಿನ ಯಾರೂ ಗಮನಿಸದ ತನ್ನನ್ನ ಈಗ ಬಂದವರೆಲ್ಲರೂ ಅಲಂಕರಿಸುತ್ತಿದ್ದಾರೆ, ಕೈಮುಗಿದು ಪ್ರಾರ್ಥಿಸುತ್ತಿದ್ದಾರೆ. ನನ್ನೊಳಗೊಂದು ಹೊಸ ಚೈತನ್ಯದ ಶಕ್ತಿ ಬಂದಿದೆ ಅಂತ ಅನ್ನಿಸಿ ಸಂಭ್ರಮ ಪಟ್ಟಿತು. ಇಷ್ಟು ದಿನ ಭಗವಂತನನ್ನ ಬೇಡಿಕೊಂಡಿದ್ದೆ ಭಗವಂತ ಕಾಲ ಬರುತ್ತೆ ತಾಳು ಅಂದಿದ್ದ. ಇವತ್ತು ಎಲ್ಲರನ್ನೂ ಕಣ್ಣು ತುಂಬಿಕೊಳ್ಳುವ ಅವಕಾಶವನ್ನು ಒದಗಿಸಿದ್ದ. ಹಾಗಾಗಿ ಎಲ್ಲವೂ ಒಳಿತಾಗುತ್ತೆ ಕಾಯಬೇಕು ತಾಳಿಕೊಳ್ಳುವ ಶಕ್ತಿ ಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ