ಸ್ಟೇಟಸ್ ಕತೆಗಳು (ಭಾಗ ೮೫೫)- ಹೀಗೂನಾ?

ಸ್ಟೇಟಸ್ ಕತೆಗಳು (ಭಾಗ ೮೫೫)- ಹೀಗೂನಾ?

ಆ ಊರುಗಳ ನಡುವೆ ಜನರಿಗೆ ಚಲಿಸುವುದಕ್ಕೆ ಅಂತ ಬಸ್ಸೊಂದನ್ನು ಊರಿನ ಯಜಮಾನ ನಿಗದಿ ಮಾಡಿದ್ದ. ಆ ಬಸ್ಸಿನಲ್ಲಿ ಜನ ಹೋಗ್ತಾ ಬರುತ್ತಾ, ಇರುತ್ತಾರೆ. ಬಸ್ಸಿನಲ್ಲಿ ಸಿಕ್ಕಿದ ಹಣದಿಂದ ಒಂದಷ್ಟು ಪಾಲು ಯಜಮಾನನಿಗೂ ಇನ್ನೊಂದು ಪಾಲು ಅದನ್ನು ಚಲಾಯಿಸುವವನಿಗೂ ಹೀಗೆ ದಿನಗಳು ಮುಂದುವರಿತಾನೆ ಇದ್ದವು. ಆ ಬಸ್ಸಿನಲ್ಲಿ ಆಗುವಂತಹ ಎಲ್ಲ ಕೆಲಸಗಳನ್ನು ಚಲಾಯಿಸುವವನೇ ನೋಡಿಕೊಳ್ಳಬೇಕು. ಹಾಳಾದಾಗ ಸರಿ ಮಾಡಬೇಕು ಯಜಮಾನ ದುಡ್ಡು ಕೊಡದಿದ್ದಾಗ ಅದರಲ್ಲಿ ಬರುವ ಪ್ರಯಾಣಿಕರ ಬಳಿ ಕೇಳಿ ಬಸ್ ನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ. ಒಂದು ದಿನವೂ ಆ ಬಸ್ಸಿನ ಬಗ್ಗೆ ಕಣ್ಣೆತ್ತಿಯೂ ನೋಡಿದ ಯಜಮಾನ ಒಂದಿಷ್ಟು ವರ್ಷಗಳು ಕಳೆದ ನಂತರ ಏನು ಜ್ಞಾನೋದಯವಾದಂತೆ ಈತನನ್ನು ಕರೆದು ನಿನ್ನ ಸೇವಾ ಅವಧಿ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ. ಆದರೆ ಕಳೆದ ಐದು ವರ್ಷಗಳಿಂದ ನಿನ್ನ ಬಸ್ಸಿನಲ್ಲಿ ಚಲಿಸುವ ಜನ ಕಡಿಮೆಯಾಗಿದ್ದಾರೆ ಹಾಗಾಗಿ ನಿನಗೆ ಇಷ್ಟು ದಿನ ನಾವು ಕೊಡುತ್ತಿದ್ದ  ಸಂಬಳವನ್ನು ಹೆಚ್ಚುವರಿಯಾಗಿ ನೀಡಿದ್ದೇವೆ ಹಾಗಾಗಿ ಹೆಚ್ಚಿನ ಮೊತ್ತವನ್ನು ವಾಪಸು ಮತ್ತೆ ನೀನು ನಮಗೆ ಹಿಂತಿರುಗಿಸಲೇಬೇಕು ಅಂತ ಕಟ್ಟಪ್ಪಣೆ ಮಾಡಿಬಿಟ್ರು. ಇಷ್ಟು ದಿನ ತಾನು ಕೈಯಿಂದ ಖರ್ಚು ಮಾಡಿದ ಹಣಕ್ಕೆ ಲೆಕ್ಕ ಸಿಗಲೇ ಇಲ್ಲ. ಯಜಮಾನನಿಗೆ ಹಣ ಬೇಕಷ್ಟೆ. ಹಿಂದಿನ ಹಲವು ವರ್ಷಗಳಲ್ಲಿ ಹೆಚ್ಚಿನ ಜನ ಆ ಬಸ್ಸಿನಲ್ಲಿ ಹೋಗುತ್ತಿದ್ದರೂ ಕೂಡ, ಆಗ ಯಜಮಾನ ಬಂದು ನಿನ್ನ ಬಸ್ಸಿನಲ್ಲಿ ತುಂಬಾ ಜನ ಪ್ರಯಾಣ ಮಾಡ್ತಾ ಇದ್ದಾರೆ ಹಾಗಾಗಿ ಹೆಚ್ಚಿನ ಹಣ ನಿನಗೆ ತಲುಪಬೇಕಾಗುತ್ತದೆ ಅಂತ ಯಾವತ್ತೂ ಮಾತಾಡಿರ್ಲಿಲ್ಲ. ಈಗ ಚಾಲಕನಿಗೆ ಏನು ಮಾಡೋದು ಅಂತ ಗೊತ್ತಾಗುತ್ತೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದಾನೆ. ಹೀಗೂ ಒಬ್ಬ ಯಜಮಾನ ಇರ್ತಾನಾ.. ಆ ಬಸ್ಸು ಚಲಿಸಲೇ ಬೇಕು ಊರಿನ ಉಪಯೋಗಕ್ಕೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ