ಸ್ಟೇಟಸ್ ಕತೆಗಳು (ಭಾಗ ೮೫೬)- ಕೂಗು

ಸ್ಟೇಟಸ್ ಕತೆಗಳು (ಭಾಗ ೮೫೬)- ಕೂಗು

ನನ್ನ ಅಮ್ಮನನ್ನ ನೀವೆಲ್ಲರೂ ಸೇರಿ ಯಾಕೆ ಕೊಂದಿರಿ? ಅವರೇನು ತಪ್ಪು ಮಾಡಿದ್ದಾರೆ? ನನಗೆ ಆಹಾರ ತರಬೇಕು ಅನ್ನೋ ಕಾರಣಕ್ಕೆ ಅವರು ಸುತ್ತಮುತ್ತ ಆಹಾರವನ್ನು ಹುಡುಕುತ್ತಾ ಹೊರಟಿದ್ದರು. ನಮ್ಮ ಕಾಡನ್ನ ಹೇಗೂ ನೀವು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ಉಪಯೋಗ ಮಾಡ್ತಾ ಇದ್ದೀರಿ. ಆಹಾರಕ್ಕಾಗಿ ಕಾಡನ್ನು ಬಿಟ್ಟು ಹೊರಗೆ ಬರಬೇಕಾದ ಅನಿವಾರ್ಯತೆ ನಮ್ಮದು. ಹಾಗಾಗಿ ಅಲ್ಲೇನೋ ಹೊಳೆಯುತ್ತಿರುವುದನ್ನು ಕಂಡು ಇದು ಆಹಾರ ಆಗಿರಬಹುದೇನೋ ಅನ್ನೋ ಕಾರಣಕ್ಕೆ ಅಮ್ಮ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಅಂತ ತಿಂದು ಬಿಟ್ಟಿದ್ದಾಳೆ. ಆದರೆ ಅದೇನೋ ಪ್ಲಾಸ್ಟಿಕ್ ಅಂತೆ. ಅದರಿಂದಾಗಿ ಅಮ್ಮನ ದೇಹದಲ್ಲಿ ಅದು ಜೀರ್ಣಿಸದೆ ನನ್ನಮ್ಮ ನರಳಿ ನರಳಿ ಸತ್ತು ಹೋಗಿದ್ದಾಳೆ. ಇನ್ನು ನಮ್ಮನ್ನು ನೋಡಿಕೊಳ್ಳುವವರು ಯಾರು? ನೀವೇನು ದೊಡ್ಡ ದೊಡ್ಡ ಶಾಲೆ ಕಾಲೇಜು ಅಂತ ಹೋಗ್ತೀರಂತೆ, ವಿದ್ಯೆ ಪಡಿತೀರಂತೆ, ನಿಮಗೆ ಯಾವುದನ್ನ ಎಸೆಯಬೇಕು? ಎಲ್ಲಿ ಎಸೆಯಬೇಕು ಅನ್ನುವ ಸಣ್ಣ ವಿವೇಚನೆಯೂ ಇಲ್ವಾ? ಮನುಷ್ಯರು ಅದರ ನೀವು  ಸತ್ತರೆ  ಅದನ್ನ ಕೇಳುವುದಕ್ಕೆ ಅಂತಲೇ ಕೋರ್ಟು ಕಚೇರಿ ಆಯೋಗ ಎಲ್ಲವೂ ಇರುತ್ತೆ. ಆದರೆ ನಮ್ಮ ಸಾವು ನಿಮಗೆ ಲೆಕ್ಕಾನೆ ಇಲ್ಲ. ಅಲ್ವಾ? ಸತ್ತ ಅಮ್ಮನ ಹೆಣದ ಮುಂದೆ ಕುಳಿತ ಪುಟ್ಟ ಜಿಂಕೆಮರಿಯ ನೋವಿನ ಕೂಗು ಹೀಗೆ ಪ್ರತಿಧ್ವನಿಸುತ್ತಿತ್ತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ