ಸ್ಟೇಟಸ್ ಕತೆಗಳು (ಭಾಗ ೮೫೮)- ಚಲನೆ

ಎಲ್ಲಿಗೆ ತಲುಪುತ್ತಿದ್ದೇನೆ? ನಾನು ಯೋಚಿಸಿದ ಗುರಿ ಯಾವುದು? ಇನ್ನೆಷ್ಟು ಸಮಯ ತೆಗೆದುಕೊಳ್ಳಬಹುದು? ಒಂದು ಅರ್ಥ ಆಗ್ತಾ ಇಲ್ಲ. ಯೋಚಿಸಿದಂತೆ ನಡೆಯುತ್ತಾ ಇದೆಯಾ? ಅಥವಾ ಬದುಕು ಇಷ್ಟ ಪಟ್ಟ ಹಾಗೆ ನಾನು ಸಾಗುತ್ತಾ ಇದ್ದೇನಾ? ಹೀಗೆ ಹೋದರೆ ಬದುಕು ಮುಂದೇನಾಗಬಹುದು ಎಲ್ಲ ಪ್ರಶ್ನೆಗಳನ್ನು ಹಾಗೆ ತಲೆ ಒಳಗೆ ತುಂಬಿಸಿಕೊಂಡು ಗೋಡೆಗೆ ಒರಗಿ ಕಣ್ಣು ಮುಚ್ಚಿದೆ. ಆ ಕ್ಷಣ ಮನಸ್ಸಿನೊಳಗೊಂದು ಮಾತು ಓಡಲಾರಂಭಿಸಿತು.
" ನೋಡು ಹೋಗಬೇಕಾದ ಜಾಗದ ಬಗ್ಗೆ ನೀನು ಒಂದಷ್ಟು ವಿಷಯ ತಿಳಿದುಕೊಂಡಿದ್ದೀಯಾ .ಅಲ್ಲಿಗೆ ತಲುಪುವುದಕ್ಕೆ ಬೇರೆ ಬೇರೆ ರೀತಿಯ ಮಾರ್ಗಗಳನ್ನು ಬಳಸಿಕೊಳ್ಳುತ್ತಾ ಹೋಗಬೇಕು. ಹೋಗುವ ಮಾರ್ಗ ಸರಿಯಿಲ್ಲ ಅನ್ನೋ ಕಾರಣಕ್ಕೆ ತಲುಪುವ ಗುರಿಯೂ ಚೆನ್ನಾಗಿರಲ್ಲ ಅಂದುಕೊಳ್ಳೋದು ತಪ್ಪು ತಾನೇ. ಕೆಲವೊಂದು ಸಲ ಯೋಚಿಸಿದ ಸಮಯದಲ್ಲಿ ತಲುಪುವುದಕ್ಕೆ ಆಗದೇ ಇರಬಹುದು, ರಸ್ತೆಯಲ್ಲಿ ತೊಂದರೆ ಆಗಬಹುದು, ನಿನ್ನ ಸ್ವಂತ ವಾಹನ ಹಾಳಾಗಬಹುದು, ರಸ್ತೆಯೇ ಸರಿಯಾಗಿಲ್ಲದೇ ಇರಬಹುದು, ದಾರಿ ತಪ್ಪುಬಹುದು. ಆದರೆ ತಿಳಿದುಕೊಂಡು ಯೋಚಿಸಿಕೊಂಡು ಅಲ್ಲಿಯವರೆಗೆ ತಲುಪಬೇಕಾದ ಜವಾಬ್ದಾರಿ ನಿಮ್ಮದೇ ತಾನೇ .ತಲುಪಿದ ನಂತರ ಬಂದ ದಾರಿ ಎಲ್ಲೋ ಮರೆತು ಹೋಗುತ್ತೆ. ಅದು ಯಾವುದು ದೊಡ್ಡದು ಅಂತ ಅನ್ಸೋದಿಲ್ಲ. ಹಾಗಾಗಿ ಎಲ್ಲಿಗೆ ತಲುಪಬೇಕು ಅನ್ನುವ ನಿರ್ಧಾರ ಗಟ್ಟಿಯಾಗಿಟ್ಟುಕೊಂಡು ಸಾಗ್ತಾ ಹೋಗು ನಿಧಾನವಾದಷ್ಟು ಅಪಘಾತವಿಲ್ಲದೆ ನಿನ್ನ ಗುರಿ ತಲುಪಬಹುದು. ಹಾಗಾಗಿ ತಲುಪುವವರೆಗೂ ತಾಳ್ಮೆ ಇರಲಿ. ಅದೇ ಮಾರ್ಗದಲ್ಲಿ ಸಾಗಿದವರಿದ್ದಾರೆ ಸಾಗುವವರು ಇದ್ದಾರೆ . ಹಾಗಾಗಿ ನಿಲ್ಲಬೇಡ ಮುಂದುವರಿತಾ ಹೋಗು ಜೀವನದಲ್ಲಿ ಗುರಿ ತಲುಪಿದವರನ್ನು ನೆನಪಿಟ್ಟುಕೊಳ್ಳುತ್ತಾರೆ ಹೊರತು ದಾರಿ ಮಧ್ಯದಲ್ಲಿ ನಿಂತವರನ್ನಲ್ಲ.
ಮನಸು ಮೌನವಾಯಿತು...ಮನಸ್ಸು ಹೇಳಿದ್ದನ್ನ ಒಪ್ಪಿಕೊಂಡು ಸಾಗೋಣ ಅಂತ ಮತ್ತೆ ಮೈ ಕೊಡವಿ ಆರಂಭ ಮಾಡಿದ್ದೇನೆ. ಮುಂದೆ ಏನಾಗುತ್ತೆ ಅನ್ನೋದು ನನಗಂತೂ ಗೊತ್ತಿಲ್ಲ. ಹಾಗಾಗಿ ನಿಂತು ಕೊಳೆಯುವುದಕ್ಕಿಂತ ಚಲಿಸಿ ಶುದ್ಧವಾಗಿರೋದು ಒಳ್ಳೆಯದು ಅಂತ ಚಲನೆ ಶುರು ಮಾಡಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ