ಸ್ಟೇಟಸ್ ಕತೆಗಳು (ಭಾಗ ೮೬೦)- ವಿಪರ್ಯಾಸ !
ಅಲ್ಲೊಂದು ಸಣ್ಣ ಅವಘಡವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೀಡಿ ಅಪರಿಚಿತರು ಕೆಲವರು ಬಂದು ಆ ಒಂದು ಮನೆಯ ಹೆಣ್ಣಿನ ಮೇಲೆ ಬಲಾತ್ಕಾರಕ್ಕೆ ಪ್ರಯತ್ನ ಪಟ್ಟಿದ್ದರು. ಅದರ ವಿಚಾರವನ್ನು ತಿಳಿಯೋದಕ್ಕೆ ಅಂತ ಪೊಲೀಸರು ಸುತ್ತಮುತ್ತ ಮನೆಯವರನ್ನು ಕೇಳಿದಾಗ ಯಾರಿಗೂ ಏನೂ ಗೊತ್ತಿರಲಿಲ್ಲ. ಹೊಸ ಸಮಸ್ಯೆ ನಮಗೆ ಯಾಕೆ ಅಂತ ಬಾಗಿಲು ಮುಚ್ಚಿ ಬಿಟ್ಟಿದ್ದರು. ಯಾರ ಮಾತು ಹೊರಡಲಿಲ್ಲ. ಪ್ರತಿಯೊಬ್ಬರೂ ಅವರವರ ಕೆಲಸದಲ್ಲಿದ್ರು ಅನ್ನುವ ಉತ್ತರವೇ ಸಿಕ್ಕಿದವು. ಮನೆಯವರು ಎಷ್ಟೇ ಬೇಡಿಕೊಂಡರೂ ಯಾರೂ ಒಂದಿನಿತೂ ಸಹಾಯ ಮಾಡಲೇ ಇಲ್ಲ. ದಿನಗಳು ಉರುಳಿದವು. ತಪ್ಪು ಮಾಡಿದವರು ಸಿಗಲೇ ಇಲ್ಲ. ಆಕೆ ನೋವಿನಿಂದ ಸ್ವಲ್ಪ ಸ್ವಲ್ಪನೇ ಹೊರಗೆ ಬರೋದ್ದಕ್ಕೆ ಪ್ರಯತ್ನ ಮಾಡಿದಳು. ಆಕೆಯ ಮನಸ್ಸಿನ ಬದಲಾವಣೆಗೆ ಕಾಲೇಜಿನ ಗೆಳೆಯರು ಮನೆತನಕ ಬಂದು ಕುಶಲೋಪರಿ ವಿಚಾರಿಸಿ ಹೋಗೋದು ಮಾತನಾಡೋದು ಮಾಡ್ತಾ ಇದ್ದರು. ಅಕ್ಕಪಕ್ಕದ ಮನೆಯವರ ನಾಲಿಗೆಗೆ ಹೊಸ ರುಚಿ ಸಿಕ್ಕಿತು. ಅಂದು ಮಾತನಾಡದ ಬಾಯಿಗಳು ಇಂದು ಡಂಗೂರ ಸಾರಿದವು. ಇದನ್ನೇ ಅಲ್ವಾ ವಿಪರ್ಯಾಸ ಅನ್ನೋದು...?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ