ಸ್ಟೇಟಸ್ ಕತೆಗಳು (ಭಾಗ ೮೬೨)- ಹಳಿ

ತಂದೆ ಹೆಗಲ ಮೇಲೆ ಆಕೆ ತಲೆ ಒರಗಿಸಿದ್ದಾಳೆ. ಅದು ಓಡುತ್ತಿರುವ ರೈಲು. ಆತ ಕುಳಿತುಕೊಳ್ಳುವುದಕ್ಕೆ ಜಾಗ ಸಿಗದ ಕಾರಣ ಅಲ್ಲಿ ಶೌಚಾಲಯದ ಪಕ್ಕದ ಸ್ಥಳದಲ್ಲಿ ಕುಳಿತುಕುಳಿತುಕೊಂಡು ಬಿಟ್ಟಿದ್ದರು. ಆಕೆಗೆ ಹೊರ ಜಗತ್ತಿನ ಬಗ್ಗೆ ಅರಿವಿಲ್ಲ. ತಂದೆಯ ಹೆಗಲ ಮೇಲೆ ಹೊರ ಜಗತ್ತನ್ನ ನೋಡುವ ಆಸೆ. ಚಲಿಸುತ್ತಿರುವ ರೈಲಿನಲ್ಲಿ ಹೊರ ಪ್ರಪಂಚದ ವೈಶಿಷ್ಟ್ಯಗಳನ್ನ ಕಣ್ಣು ಮಿಟುಕಿಸದೆ ನೋಡುತ್ತಿದ್ದಾಳೆ. ತಂದೆಯ ಕಿಸೆಯೊಳಗಿನ ನೋವು ಹಣೆಯ ಮೇಲಿನ ಬೆವರ ಹನಿಯ ಕಾವು ಆಕೆಗೆ ಗೊತ್ತಿಲ್ಲ. ತಂದೆ ಆತ ತನಗೋಸ್ಕರ ತನ್ನಿಡೀ ಜೀವನವನ್ನು ಮುಡಿಪಾಗಿಡುತ್ತಾನೆ ಅನ್ನುವ ನಂಬಿಕೆ ಆಕೆಯದು. ಮತ್ತೆ ಆ ರೈಲು ಹತ್ತೋದಕ್ಕೆ ತನ್ನ ತಂದೆ ಪಟ್ಟ ಕಷ್ಟ ಆಕೆಗೆ ಅರಿವಿಲ್ಲ. ಆತನೊಬ್ಬನೇ ಪ್ರಪಂಚ ಆಕೆಗೆ. ಆಕೆಯ ಪ್ರಪಂಚವೇ ಆತನ ಜೀವನ. ಹೀಗೆ ಇಬ್ಬರ ಪ್ರಪಂಚದ ವಿವಿಧ ಕನಸುಗಳು ಯೋಚನೆಗಳು ಒಟ್ಟು ಸೇರಿವೆ. ರೈಲು ಇವರ ಜೀವನದ ದಿಶೆಯನ್ನು ಬದಲಿಸಲಿದೆ. ಇಬ್ಬರಿಗೂ ಉತ್ಸಾಹವಿದೆ. ತಂದೆ ಒಂದಷ್ಟು ಚಿಂತೆಯ ನಡುವೆ ಉತ್ಸಾಹವಾದರೆ ಮಗಳಿಗೆ ಅಪರಿಮಿತ ಉತ್ಸಾಹವೇ ಜೊತೆಯಾಗಿದೆ. ರೈಲಿನ ಹಳಿಗಳು ಬದುಕಿನ ಹಳಿಯನ್ನ ನಿರ್ಧರಿಸಲಿದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ