ಸ್ಟೇಟಸ್ ಕತೆಗಳು (ಭಾಗ ೮೬೩)- ಕನಸು

ಆ ಮನೆಯೊಂದು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಅದಕ್ಕಾಗಿ ಹಲವಾರು ಜನ ಪರಿಶ್ರಮ ಪಡುತ್ತಿದ್ದಾರೆ. ಅದು ಅವರ ದಿನದ ದುಡಿಮೆಗೆ. ತಮ್ಮ ಮನೆ ನಡೆಯುವುದಕ್ಕೋಸ್ಕರ ಈ ಮನೆಯನ್ನ ನಿಲ್ಲಿಸುವುದ್ದಕ್ಕೆ ಕೆಲಸಕ್ಕೆ ಬಂದವರಿದ್ದಾರೆ. ಹಾಗೆ ಅವರೆಲ್ಲರ ಶ್ರಮದಿಂದ ಮನೆಯೊಂದು ನೆಲದಿಂದ ಮೇಲೆದ್ದು ನಿಲ್ತಾ ಇದೆ.ಹಾಗೆ ಮನೆ ಕಟ್ಟುವ ಕೆಲಸದಲ್ಲಿ ತನ್ನ ತಂದೆ ತಾಯಿಗಳ ಜೊತೆ ಆ ಪುಟ್ಟ ಹುಡುಗ ಜೊತೆಯಾಗಿದ್ದಾನೆ. ಅಪ್ಪ ಅಮ್ಮ ಮಾಡುವ ಕೆಲಸವನ್ನ ಶಾಲೆ ಮುಗಿಸಿ ತಾನು ಮುತುವರ್ಜಿ ವಹಿಸಿ ಮುಂದುವರಿಸುತ್ತಾನೆ. ರಜೆ ದಿನದಲ್ಲಿ ಕೆಲಸ ಮಾಡ್ತಾನೆ. ಹೆಚ್ಚೇನೂ ಸಿಗುತ್ತದೆ ಎನ್ನುವ ಆಸೆ ಅಲ್ಲ. ಅಪ್ಪ ಅಮ್ಮನ ಕಷ್ಟ ನನಗೂ ಅರ್ಥ ಆಗಬೇಕು. ಮನೆಯಲ್ಲಿ ಅಮ್ಮನಿಗೆ ಅಡುಗೆ ಮಾಡಿಟ್ಟು ಹೋಗೋದಕ್ಕೆ ಆಗೋದಿಲ್ಲ ಅನ್ನುವ ನೋವು ಕಡಿಮೆಯಾಗಬೇಕು, ಈ ಕಾರಣಕ್ಕೆ ತನ್ನ ಕೈಲಾದ ಕೆಲಸವನ್ನು ಮಾಡ್ತಾ ಹೋಗ್ತಿದ್ದಾನೆ. ಮನೆ ಕಟ್ಟುವುದು ಹೇಗೆ ಅಂತ ಈಗಲೇ ಗೊತ್ತಾಗಬೇಕು, ಮುಂದೊಂದು ದಿನ ತಾನು ಪುಟ್ಟದೊಂದು ಮನೆ ಕಟ್ಟಬೇಕು ಏನೇನೋ ಕನಸುಗಳನ್ನು ಮನಸ್ಸಲ್ಲಿ ಹೊತ್ತು ಮಣ್ಣನ್ನ ತಲೇಲಿ ಹೊರುತ್ತಿದ್ದಾನೆ. ಹೆಜ್ಜೆಗಳು ಸಣ್ಣದು, ದೇಹ ಸಣ್ಣದು, ಆದರೆ ಆಲೋಚನೆ ದೊಡ್ಡದು. ಒಂದು ದಿನವೂ ಆ ತಂದೆ ತಾಯಿಗಳು ಬೇಡ ಮಗು ನೀನು ಕೆಲಸ ಮಾಡಬೇಡ ಮನೆಯಲ್ಲಿ ಕುಳಿತು ಓದು ಅನ್ನುವ ಮಾತನ್ನು ಹೇಳಿಲ್ಲ, ಯಾಕೆಂದರೆ ಅವರಿಗೂ ಗೊತ್ತಿದೆ ಬದುಕು ಅರ್ಥವಾಗುವುದು ಜೊತೆಗೆ ಬದುಕಿದಾಗ ಮಾತ್ರ... ಕನಸು ಬೆಳೆಯುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ