ಸ್ಟೇಟಸ್ ಕತೆಗಳು (ಭಾಗ ೮೬೪)- ಅನ್ನ

ಆಕೆಗೆ ಹೊಟ್ಟೆ ಹಸಿಯುತ್ತಿದೆ. ಹಲವು ಕಡೆ ಕೈ ಎತ್ತಿ ಬೇಡಿದರೂ ಸಹ ಯಾರು ಒಂದಗುಳನ್ನು ನೀಡಲಿಲ್ಲ. ನೀರು ಅದೆಷ್ಟು ಅಂತ ಹೊಟ್ಟೆ ಒಳಗೆ ಹಿಡಿಯೋದು. ಕಳೆದ ಒಂದು ವಾರದಿಂದ ನೀರು ಮಾತ್ರ ಹೊಟ್ಟೆಗೆ ಇಳಿತಾ ಇದೆ. ಹಾಗೆ ಹುಡುಕಿ ಹೋದ ಅವಳಿಗೆ ಸಿಕ್ಕಿತು ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಆ ಸಣ್ಣ ಪಾತ್ರೆ. ಅದರಲ್ಲಿ ಅನ್ನವಿತ್ತು. ಅದು ಯಾರು ತಿಂದು ಬಿಸಾಡಿದ್ದೋ ಗೊತ್ತಿಲ್ಲ. ಬಿಸಾಡಿ ದಿನಗಳಾದ ನಂತರ ಹುಳಗಳು ಆ ಸ್ಥಳವನ್ನು ಆಕ್ರಮಿಸಿಕೊಂಡುಬಿಟ್ಟಿದ್ದವು. ಹುಳಗಳು ತಮ್ಮ ಹೊಟ್ಟೆ ತುಂಬುವುದಕೋಸ್ಕರ ತಿನ್ನುತ್ತಿದ್ದ ಆಹಾರವನ್ನು ಆಕೆ ತಿನ್ನತೊಡಗಿದಳು. ಹುಳಗಳನ್ನ ಪಕ್ಕಕ್ಕೆ ಸರಿಸಿ ತಿನ್ನುವಾಗ ಕಣ್ಣಲ್ಲಿ ಕಣ್ಣೀರು ಇಳಿಯುತ್ತಿದೆ, ಹೊಟ್ಟೆಯೊಳಗೆ ಇಂದಾದರೂ ಆಹಾರ ಸೇರಿತ್ತಲ್ಲ ಎನ್ನುವ ನೆಮ್ಮದಿಗೆ. ಆಕೆ ಸುತ್ತ ಮತ್ತೆ ನೋಡುತ್ತಿದ್ದಾಳೆ ಭಯವೆನಿಸಿದೆ ಆಕೆಗೆ, ನಾಳೆಯ ಹೊಟ್ಟೆಗೆ ಉತ್ತರವೇನನ್ನ ನೀಡಲಿ. ಅನ್ನದ ಅಗುಳುಗಳು ನೋಡುವುದಕ್ಕೆ ಮಾತ್ರ ಸಣ್ಣ. ಆದರೆ ಬದುಕಿನ ಅತ್ಯಮೂಲ್ಯ ವಸ್ತು ಅನ್ನೋದು ಆಕೆಗೆ ಅರಿವಾಗಿತ್ತು. ನೋಡಿದ ನನಗೆ ನನ್ನ ತಟ್ಟೆಯಲ್ಲಿಟ್ಟ ಚೆಲ್ಲುವ ಅನ್ನದ ಅಗುಳಿನ ಮೌಲ್ಯ ತಿಳಿಯುವುದು ಯಾವಾಗಲೋ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ