ಸ್ಟೇಟಸ್ ಕತೆಗಳು (ಭಾಗ ೮೬೬)- ಬೇಧ ಭಾವ

ಸ್ಟೇಟಸ್ ಕತೆಗಳು (ಭಾಗ ೮೬೬)- ಬೇಧ ಭಾವ

ಅವಘಡಗಳು ಹಾಗೆ ಅವಳ ಬದುಕಿನಲ್ಲಿ ಹಾದು ಹೋಗುತ್ತಾನೇ ಇದ್ದವು. ಚೆನ್ನಾಗಿ ಸಾಗುತ್ತಿದ್ದ ಗಾಡಿ ತಂದೆಯನ್ನು ಕಳೆದುಕೊಂಡ ಕೂಡಲೇ ಒಂದನ್ನು ನಿಧಾನವಾಗಿ ಚಲಿಸುವುದಕ್ಕೆ ಆರಂಭವಾದವು. ಅವಳಲ್ಲಿ ಶಕ್ತಿ ಇದ್ದರೂ ಕೂಡ ಕುಟುಂಬದವರು ನಾವಿಲ್ಲದೆ ಚಲಿಸುವುದಕ್ಕೆ ಸಾಧ್ಯವೇ ಇಲ್ಲ ಅನ್ನೋ ಕಾರಣಕ್ಕೆ ಅವರಾಗಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಆರಂಭ ಮಾಡಿದರು. ಅವಳ ಮಾತುಗಳಿಗೆ ಅಲ್ಲೆಲ್ಲೂ ಕೂಡ ಬೆಲೆನೇ ಸಿಕ್ತಾ ಇರಲಿಲ್ಲ. ಅವಳ ಜೀವನವನ್ನ ಯಾರದೋ ಒಬ್ಬರ ಕುತ್ತಿಗೆಗೆ ಕಟ್ಟಿ ತಮ್ಮ ತಲೆ ಮೇಲೆ ಹೊತ್ತ ಭಾರವನ್ನ ಇಳಿಸಿಕೊಳ್ಳುವುದಕ್ಕೆ ಎಲ್ಲರೂ ಕಾಯ್ತಾ ಇದ್ದರು. ಅದಕ್ಕಾಗಿ ಅವಳ ಕನಸುಗಳ ಬಗ್ಗೆ ಅವರಿಗೆ ಯೋಚನೆಗಳು ಇರಲಿಲ್ಲ. ಹಾಗಾಗಿ ತಮ್ಮದೇ ಇಷ್ಟದ ಹುಡುಗನನ್ನು ಹುಡುಕಿ ಮದುವೆ ಮಾಡಿಬಿಟ್ರು. ಅವಳ ಇಷ್ಟದ ಬಗ್ಗೆ ಪ್ರಶ್ನೆಗಳೇ ಇರಲಿಲ್ಲ. ಆಕೆ ತಲೆತಗ್ಗಿಸಿ ಮಾತಿಗೆ ಒಪ್ಪಿಗೆ ಕೊಡುತ್ತಲೇ ಅವಳ ಎಲ್ಲಾ ಕನಸುಗಳು ಮೂಲೆಗೊರಗಿ ಹೋದವು. ವರ್ಷಗಳು ಉರುಳುತ್ತಾ ಹೋದ ಹಾಗೆ ತಮ್ಮ ಮನೆಯ ಮಗಳಿಗೂ ಬದುಕನ್ನು ನಿರ್ಮಿಸಿ ಕೊಡುವ ಜವಾಬ್ದಾರಿಯು ಬಂದಾಗ, ಹಲವು ಅವಕಾಶಗಳನ್ನು ನೋಡಿ ನೋಡಿ ತಮ್ಮ ಮಗಳ ಒಪ್ಪಿಗೆಯನ್ನು ಕೇಳಿ ಅವಳ ಬದುಕಿನ ಎಲ್ಲಾ ಕನಸುಗಳನ್ನು ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡು ಅವರಿಷ್ಟದಂತೆ ಮದುವೆ ಮಾಡಿಬಿಟ್ಟರು. ಜವಾಬ್ದಾರಿಯನ್ನು ತುಂಬ ಜತನದಿಂದ ನಿಭಾಯಿಸಿದ್ದೇನೆ ಅನ್ನುತ್ತಾ ದೇವರಿಗೆ ದೀಪ ಬೆಳಗಿಸಿದರು. ಸ್ವಂತ ಮಗಳಿಗಾಗುವಾಗ ಬಂದ ಯೋಚನೆ ತಂದೆ ಇಲ್ಲದ ಮಗಳ ಬಗ್ಗೆ ಬರೆದಿರುವುದು ವಿಪರ್ಯಾಸ...ದೇವರು ನಗುತ್ತಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ