ಸ್ಟೇಟಸ್ ಕತೆಗಳು (ಭಾಗ ೮೬೮)- ಪಾರ್ಸೆಲ್

ಸ್ಟೇಟಸ್ ಕತೆಗಳು (ಭಾಗ ೮೬೮)- ಪಾರ್ಸೆಲ್

ಆ ಊರಿನಲ್ಲೊಬ್ಬ ಪಾರ್ಸೆಲ್ ಕೊಡುವವನಿದ್ದಾನೆ. ಆತ ಊರಿನ ಪ್ರತಿಯೊಬ್ಬರಿಗೂ ಪ್ರತಿದಿನವೂ ಪಾರ್ಸೆಲ್ ಅನ್ನು ಕಳುಹಿಸುತ್ತಾ ಇರ್ತಾನೆ. ಆದರೆ ಸ್ವೀಕರಿಸುವವರಿದ್ದಾರಲ್ಲ ಕೆಲವೊಂದು ಸಲ ಅವರು ಅದನ್ನ ಸರಿಯಾಗಿ ಸ್ವೀಕರಿಸುವುದಿಲ್ಲ, ಕೆಲವೊಮ್ಮೆ ಅವರ ಮನಸ್ಥಿತಿ ಸರಿ ಇರುವುದಿಲ್ಲ, ಇನ್ನೂ ಕೆಲವೊಂದು ಸಲ ವಿಳಾಸವೇ ತಪ್ಪಾಗಿರುತ್ತದೆ, ಆದರೆ ಆ ಊರಿನವರ ಸಮಸ್ಯೆ ಏನು ಅಂತ ಅಂದ್ರೆ ಅವರೆಲ್ಲರೂ ಕೂಡ ಪಾರ್ಸಲ್ ಇಂಥದ್ದೇ ಸಿಗಬೇಕು ಅನ್ನುವ ಯೋಚನೆಯನ್ನೇ ಕಟ್ಟಿ ಕೊಂಡಿರುತ್ತಾರೆ. ಖಾಲಿಯಾದ ಮನಸ್ಸಿನಿಂದ ಪಾರ್ಸೆಲ್ ಅನ್ನು ಸ್ವೀಕರಿಸಿದರೆ ಅವರಿಗೆ ತುಂಬಾ ಖುಷಿ ತುಂಬಾ ಸಂಭ್ರಮ ಕಾಯುತ್ತಿರುತ್ತದೆ. ಒಂದು ದಿನವೂ ಅವನು ಪಾರ್ಸೆಲ್ ಕಳುಹಿಸುವುದನ್ನ ನಿಲ್ಲಿಸಿಲ್ಲ ಮತ್ತು ಬೇಜಾರು ಮಾಡಿಕೊಂಡಿಲ್ಲ. ನನಗೂ ಒಂದು ಸಲ ಆ ಊರಿಗೆ ಹೋಗಬೇಕು ಅಂತ ಅನಿಸಿತು. ಆದರೆ ಮೊನ್ನೆ ಒಬ್ಬ ಸಿಕ್ಕಿದ ಗೆಳೆಯ ಹೀಗೆ ಹೇಳಿದ ಆ ಊರಿನ ಹಾಗೆ ನಿನಗೂ ಪಾರ್ಸಲ್ ಬರುತ್ತಾ ಇರುತ್ತೆ. ಪ್ರತಿದಿನದ ಬೆಳಗ್ಗಿನ ಏಳುವಿಕೆಗೆ ನಿನ್ನ ಪಾರ್ಸಲ್ ಓಪನ್ ಆಗುತ್ತೆ. ಆ ದಿನವನ್ನು ಹೇಗೆ ಸ್ವೀಕರಿಸಿದ್ದೀಯ ಅನ್ನೋದರ ಮೇಲೆ ಆ ಪಾರ್ಸೆಲಿನ ಒಳಗಿನ ವಿಚಾರಗಳು ನಿನಗೆ ಖುಷಿಯನ್ನು ಕೊಡಬಹುದು ನೋವನ್ನು ಕೊಡಬಹುದು. ಹಾಗಾಗಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡ ಬಂದದ್ದನ್ನು ಸಂಭ್ರಮದಿಂದ ಸ್ವೀಕರಿಸಿದರೆ ಎಲ್ಲ ಪಾರ್ಸೆಲ್ ಗಳು ನಿನಗೆ ಖುಷಿಯನ್ನು ಕೊಟ್ಟೆ ಕೊಡುತ್ತವೆ ಹಾಗಾಗಿ ಪ್ರತಿದಿನವೂ ಪಾರ್ಸಲ್ ಗೆ ಕಾಯ್ತಾ ಇರು ಒಳಗೇನಿದೆ ಅನ್ನೋದಕ್ಕಲ್ಲ ಪಾರ್ಸೆಲ್ ಸಿಕ್ಕಿದೆ ಅಲ್ವಾ ಅನ್ನೋದಕ್ಕೆ... ನಿಮ್ಗೂ ಭಗವಂತನ ಪಾರ್ಸೆಲ್ ಬಂತಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ