ಸ್ಟೇಟಸ್ ಕತೆಗಳು (ಭಾಗ ೮೭೦)- ಮುಚ್ಚುವವರು

ಸ್ಟೇಟಸ್ ಕತೆಗಳು (ಭಾಗ ೮೭೦)- ಮುಚ್ಚುವವರು

ಬೇಕಾಗಿದ್ದಾರೆ. ಅತ್ಯಂತ ತುರ್ತಾಗಿ ಪ್ರಾಮಾಣಿಕವಾಗಿ ಕೆಲಸವನ್ನ ನಿರ್ವಹಿಸುವವರು. ಮತ್ತೆ ತುಂಬಾ ಪ್ರೀತಿಯಿಂದ ಶ್ರದ್ಧೆಯಿಂದ ನಾವು ಹೇಳಿದಂತೆ ಕೆಲಸವನ್ನು ಮಾಡುವವರು ಆಗಿರಬೇಕು. ಹೀಗಿದ್ದ ಜಾಹೀರಾತೊಂದು ಗಮನ ಸೆಳೆಯಿತು. ಅಲ್ಲಿ ಹಾಕಿದ ವಿಳಾಸವನ್ನು ಹುಡುಕಿ ಹೋಗಿ ಕೆಳಿದಾಗ ಅವರು ಕೆಲಸದ ಎಲ್ಲಾ ನಿರ್ದೇಶನಗಳನ್ನು ನೀಡಿದರು. ನೋಡಿ ಸ್ವಾಮಿ, ಈ ಕೆಲಸ ನೀವು ಇಷ್ಟರವರೆಗೂ ಮಾಡಿರಲಿಕ್ಕಿಲ್ಲ, ನೋಡಿರಲಿಕ್ಕೂ ಇಲ್ಲ. ಇದು ಒಂದು ವಿನೂತನವಾದ ಕೆಲಸ. ಆಸಕ್ತಿ ಇದ್ದರೆ ಮಾತ್ರ ಮಾಡಬಹುದು. ಜಗತ್ತಿನಲ್ಲಿ ನಮ್ಮ ಮುಂದೆ ನಿಂತವರ ಬಾಯಿಯನ್ನು ಮುಚ್ಚಿಸುವುದಕ್ಕಾಗುವುದಿಲ್ಲ. ಅವರು ಸಾವಿರ ಮಾತುಗಳನ್ನು ಆಡ್ತಾ ಇರ್ತಾರೆ. ಕೆಲವೊಂದು ನಮಗೆ ವಿಪರೀತವಾದ ನೋವನ್ನು ಕೊಡ್ತಾ ಇದೆ ಅನ್ನೋದು ಅವರಿಗೆ ಗೊತ್ತಿದ್ದರೂ ಸಹ ಅವರ ಬಾಯಿ ನಿಲ್ಲುವುದಿಲ್ಲ. ಆಗ ನಾವು ಅಸಹಾಯಕರಾಗಿ ಬಿಡುತ್ತೇವೆ. ಎಲ್ಲವನ್ನು ಕೇಳಿಕೊಳ್ಳ ಬೇಕಾದಂತಹ ಅನಿವಾರ್ಯ ಪರಿಸ್ಥಿತಿಗೆ ತಲುಪಿ ಬಿಡುತ್ತೇವೆ. ಈಗ ನಮಗಿಲ್ಲಿ ಬೇಕಾಗಿರುವುದು ಕಿವಿ ಮುಚ್ಚುವವರು. ನಮಗೆ ಅಗತ್ಯವಾದ, ಮಾಹಿತಿಪೂರ್ಣವಾದ ವಿಷಯಗಳನ್ನು ಮಾತ್ರ ಮನಸ್ಸಿನೊಳಗೆ ತೆಗೆದುಕೊಂಡು ಬಿಡುವಂತಹ, ನಮಗೆ ಅಗತ್ಯವಿಲ್ಲದ್ದನ್ನು ಅನಗತ್ಯವಾಗಿ ನೋವನ್ನುಂಟು ಮಾಡುವಂಥದ್ದನ್ನ ಕೇಳಿಸದಂತೆ ಕಿವಿಯನ್ನು ಗಟ್ಟಿಯಾಗಿ ತಡೆ ಹಿಡಿದು ನಿಲ್ಲಿಸುವವರು ಬೇಕಾಗಿದ್ದಾರೆ. ನಾವಾಗಿ ಕೇಳಬಾರದು ಅಂದುಕೊಂಡರೂ ಕೂಡ ಶಬ್ಧಗಳು ಹಾಗೆ ತರಂಗಗಳ ರೂಪದಲ್ಲಿ ಮನಸ್ಸಿನೊಳಗೆ ತಲುಪಿ ಶಾಂತ ಸರೋವರವನ್ನು ಅಲ್ಲೋಲಕಲ್ಲೋಲ ಮಾಡಿ ಬಿಡುತ್ತದೆ. ಹಾಗಾಗಿ ಈ ಕೆಲಸಕ್ಕೆ ಜನ ಬೇಕಾಗಿದ್ದಾರೆ. ನಿಮ್ಮಲ್ಲಾರಿಗಾದರೂ ಆಸಕ್ತಿ ಇದ್ದರೆ ದಯವಿಟ್ಟು ತಿಳಿಸಿ. ನಿಮಗೆ ಯಾರಿಗಾದರೂ ಜನ ಬೇಕಾಗಿದ್ದರೂ ಕೂಡಾ ತಿಳಿಸಿ... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ