ಸ್ಟೇಟಸ್ ಕತೆಗಳು (ಭಾಗ ೮೭೧)- ದರ್ಶನ
ಭಗವಂತನ ಕಾಣಬೇಕು ಎಂಬ ಆಸೆಯಿಂದ ಆತ ಹೊರಟಿದ್ದಾನೆ. ಜೀವನದಲ್ಲಿ ಇಲ್ಲಿಯವರೆಗೂ ಬೆಳಕನ್ನೇ ಕಾಣದ ಮನಸ್ಸದು. ಕತ್ತಲೆಯೊಳಗೆ ಎಲ್ಲವನ್ನ ಕಲ್ಪಿಸಿಕೊಂಡು ಮನಸ್ಸಿನೊಳಗಿನ ದರ್ಶನವನ್ನ ಸಿದ್ದಿ ಮಾಡಿಕೊಳ್ಳುವುದಕ್ಕೆ ಭಗವಂತನ ಬಳಿಗೆ ಕೈ ಮುಗಿದು ಇನ್ನೊಂದಷ್ಟು ಧೈರ್ಯವನ್ನು ಪಡೆದುಕೊಳ್ಳಲು ಹೊರಟಿದ್ದಾನೆ. ಆದರೆ ಜೇಬೊಳಗೆ ತುಂಬಿದ ದುಡ್ಡು ಎಲ್ಲಿಯವರೆಗೆ ತಲುಪಿಸುತ್ತೆ ಅನ್ನೋದು ಆತನಿಗೂ ಗೊತ್ತಿರಲಿಲ್ಲ. ಹಾಗೆ ಅರ್ಧದಾರಿ ತಲುಪಿದವನಿಗೆ ಕಿಸೆಯೊಳಗೆ ತುಂಬಿದ ದುಡ್ಡು ಖಾಲಿಯಾದಂತೆ ಭಾಸವಾಯಿತು. ದಾರಿ ತೋರಿಸೋಕೆ ಭಗವಂತನೇ ನಿರ್ವಾಹಕನ ರೂಪದಲ್ಲಿ ಬಂದು ಇಳಿದು ಬಿಟ್ಟಿದ್ದ. ತುಂಬ ದೂರದ ಪ್ರಯಾಣವನ್ನು ಚಿಲ್ಲರೆ ಪಡೆದು ಅಲ್ಲಿಯವರೆಗೂ ತಲುಪುವಂತೆ ಮಾಡಿದ್ದ. ಆತ ಕಣ್ಣುಮುಚ್ಚಿ ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದದ್ದಿಷ್ಟೆ. ನಿನ್ನ ಪಾದದ ಬಳಿಗೆ ನನ್ನನ್ನು ಕರೆದುಕೊಂಡು ಒಮ್ಮೆ ಕಣ್ಣು ತುಂಬಾ ನನ್ನನ್ನು ನೋಡಿ ಬಿಡು ಎಂದು. ಎಲ್ಲರೂ ಭಗವಂತನ ಬಳಿಗೆ ಆತನ ನೋಡೋದಕ್ಕೆ ಹೋದರೆ ಈತನನ್ನ ನೋಡುವುದ್ದಕ್ಕೆ ಭಗವಂತನೇ ಕರೆಸಿಕೊಂಡಿದ್ದ. ದೇವರ ದರ್ಶನ ಹೇಗಾಯಿತು ಅಂತ ಇವನಲ್ಲಿ ಯಾರೂ ಕೇಳುವ ಹಾಗಿಲ್ಲ. ದೇವರಲ್ಲಿಯೇ ನಿಮ್ಮ ಭಕ್ತನ ದರ್ಶನ ಹೇಗಾಯಿತು ಅಂತ ಕೇಳಬೇಕು. ಕಣ್ಣಿದ್ದು ಕಂಡ ಕಲ್ಮಶಗಳೆಲ್ಲವನ್ನ ತೊರೆದು ಬರುವುದಕ್ಕೆ ಹೊರಡುವವರು ಹಲವು ಮಂದಿ, ಆದರೆ ಈತ ನೋಟದ ಕಲ್ಮಶಗಳಲ್ಲಿ ಯಾವುದನ್ನು ಕೊಂಡೊಯ್ಯದೆ ಕೇವಲ ನಿರ್ವಿಕಾರ ಭಾವದಿಂದ ಇನ್ನೊಂದಷ್ಟು ಚೈತನ್ಯವನ್ನು ಪಡೆಯುವುದಕ್ಕೆ ಭಗವಂತನ ಬಳಿಗೆ ಹೊರಟಿದ್ದಾನೆ. ಭಗವಂತನು ಕಾಯುತ್ತಿದ್ದಾನೆ. ತನ್ನ ಕಣ್ಣಿನಿಂದ ಕಣ್ಣಿಲ್ಲದ ಭಕ್ತನ ಮನಸ್ಸನ್ನು ತಲುಪುವುದಕ್ಕೆ. ಗರ್ಭಗುಡಿಯ ಬಾಗಿಲನ್ನು ತೆರೆದು ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ