ಸ್ಟೇಟಸ್ ಕತೆಗಳು (ಭಾಗ ೮೭೨)- ಒಳಗಿನವ
ಆತ ಎಲ್ಲಿದ್ದ ಎಂದು ಇಷ್ಟು ದಿನದವರೆಗೂ ಗೊತ್ತಿರಲಿಲ್ಲ. ತುಂಬಾ ಸಮಯದ ಹಿಂದಿನವರೆಗೂ ಆತನ ಪರಿಚಯವೇ ಇರಲಿಲ್ಲ. ನನ್ನ ಜೊತೆಗೆ ಸಹವರ್ತಿ ಆಗಿರಲಿಲ್ಲ. ಆದರೆ ದಿನಗಳು ಕಳೆದಂತೆ ಆತ ನನ್ನ ಜೊತೆಗೆ ಇರೋದಕ್ಕೆ ಆರಂಭ ಮಾಡಿದ. ಈಗ ಎಷ್ಟು ಗಟ್ಟಿಯಾಗಿದ್ದಾನೆ ಅಂತ ಹೇಳಿದ್ರೆ ಆತನಿದ್ದಾಗಲೇ ನನ್ನ ಬದುಕಿಗೊಂದು ಅರ್ಥ ಎನ್ನುವಷ್ಟು. ಆತನದ್ದು ಒಂದಷ್ಟು ಷರತ್ತುಗಳಿದ್ದಾವೆ. ಹೋ ಆತ ಯಾರು ಅಂತೀರಾ. ನನ್ನ ಒಳಗೊಬ್ಬ ಕೂತು ಒಂದಷ್ಟು ಹೆಸರು ಮಾಡಬೇಕು, ಒಂದಷ್ಟು ಜನ ಗುರುತಿಸಿಕೊಳ್ಳಬೇಕು ನಾನು ಏನು ಅಂತ ಸಾಧನೆ ಮಾಡಿದ್ದೇನೆ ಅಂತ ತೋರಿಸಬೇಕು ಅನ್ನುವ ಯೋಚನೆ ಇದೆಯಲ್ಲ, ಅವನೇ ಇವನು. ಅವನು ಆಗಾಗ ನನ್ನೊಳಗೆ ಎಚ್ಚರಿಸ್ತಾ ಇರುತ್ತಾನೆ. ನನ್ನನ್ನು ಯಾವಾಗ ಗುರುತಿಸುತ್ತೀಯಾ? ಎಲ್ಲರಿಗಿಂತ ವಿಶೇಷವಾಗಿ ಎತ್ತರಕ್ಕೆ ಯಾವಾಗ ಏರ್ತೀಯಾ? ಎಳ್ಲರೂ ಓಡಿ ಬಂದು ಮಾತನಾಡಿಸುವ ದಿನಗಳನ್ನು ಯಾವಾಗ ಉಂಟುಮಾಡಿಕೊಳ್ಳುತ್ತೀಯಾ? ನಿನ್ನದೇ ಆದ ಒಂದಷ್ಟು ಜನರನ್ನು ಸುತ್ತಮುತ್ತ ಯಾವಾಗ ಇಟ್ಟುಕೊಳ್ಳುತ್ತೀಯಾ? ಹೀಗೆ ಅವನದೇ ಒಂದಷ್ಟು ಪ್ರಶ್ನೆಗಳನ್ನ ನನ್ನ ಮುಂದೆ ಇಡುತ್ತಾನೆ. ನನಗೆ ಅದಕ್ಕೆ ಏನು ಉತ್ತರ ಕೊಡಬೇಕು ಅಂತಾನೆ ಗೊತ್ತಾಗ್ತಾಯಿಲ್ಲ. ನಾನು ಒಂದು ಯೋಚನೆ ಮಾಡುವುದು, ನಾವು ಬದುಕಿದ್ದರೆ ಸಾಕಾಗುವುದಿಲ್ಲವೇ? ಈ ಹೆಸರು ಗುರುತಿಸುವಿಕೆ, ಸಾಧನೆ ಯಾಕೆ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ