ಸ್ಟೇಟಸ್ ಕತೆಗಳು (ಭಾಗ ೮೭೩)- ಲಾಭ

ಸ್ಟೇಟಸ್ ಕತೆಗಳು (ಭಾಗ ೮೭೩)- ಲಾಭ

ಆ ಊರಲ್ಲಿ ಒಂದು ಸುಂದರವಾದ ತೋಟ. ಆ ತೋಟದಲ್ಲಿ ಹಲವಾರು ಬಗೆಯ ಹಣ್ಣಿನ ಹೂವಿನ ಗಿಡಗಳು ಕೂಡ ಇದ್ದಾವೆ. ಅಲ್ಲೊಂದು ವಿಶೇಷವಾದ ಮರ. ವಿವಿಧ ರೀತಿಯ ಹಣ್ಣುಗಳನ್ನು ಕೊಡುವಂತಹದ್ದು. ಅದರಿಂದ ರೈತನಿಗೆ ವಿಪರೀತವಾಗಿ ಲಾಭವು ಕೂಡ ಆಗ್ತಾ ಇತ್ತು. ರೈತ ಮರವನ್ನ ತುಂಬಾ ಚೆನ್ನಾಗಿ ಆರೈಕೆ ಕೂಡ ಮಾಡಿಕೊಂಡಿದ್ದ. ಬೇರೆ ಬೇರೆ ತೋಟದ ಯಜಮಾನರು ಆ ಮರವನ್ನ ಮರದ ಬೀಜವನ್ನು ಕೇಳಿದರು ಕೂಡ ಆತ ನೀಡಿರಲಿಲ್ಲ. ಮರ ಹೋಗುವುದ್ದಕ್ಕೆ ಒಪ್ಪಿರಲಿಲ್ಲ. ಎಷ್ಟೇ ಹೆಚ್ಚಿನ ಬೆಲೆ ಕೊಡುತ್ತೇವೆ ಅಂದರು ಕೂಡ ಮರಕ್ಕೆ ತನಗೆ ಸಿಗುತ್ತಿರುವ ಆರೈಕೆಗಳನ್ನು ನೋಡಿ ಅದು ಅಲ್ಲೇ ಉಳಿದುಕೊಂಡು ಬಿಡುತ್ತದೆ. ಹಲವು ಸಮಯದಿಂದ ಅದೇ ಸತ್ವ ಅದೇ ನೀರಿನ ಅಂಶಗಳನ್ನು ಪಡೆದು ತನ್ನ ಸುತ್ತಮುತ್ತ ಕಾಣುವ ಆ ತೋಟವನ್ನೇ ಗಮನಿಸಿಕೊಂಡು ಮರ ಬೆಳೆಯುತ್ತಿತ್ತು, ಭಗವಂತ ಆ ಮರವನ್ನು ಭೂಮಿಗೆ ಕಳಿಸುವಾಗ ಒಂದು ಷರತ್ತು ಹಾಕಿದ್ದ ನೀನು ಒಂದೇ ಕಡೆ ಸ್ಥಿರವಾಗಿ ನಿಲ್ಲಬೇಡ ನಿನ್ನ ಬೀಜಗಳನ್ನ ಅಲ್ಲಲ್ಲಿ ಹಾಕ್ತಾ ಹಲವು ಜನರಿಗೆ ಉಪಯೋಗವಾಗುವ ಹಾಗೆ ಬದುಕು ಅಂತ. ಮರ ಅದನ್ನ ಮರೆತುಬಿಟ್ಟಿತ್ತು. ಅಲ್ಲೇ ನಿಂತು ಬಿಟ್ಟ ಕಾರಣ ಅದರ ಬೇರುಗಳು ಇನ್ನು ವಿಶೇಷವಾಗಿ ಬೆಳೆಯಲಿಲ್ಲ, ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯುವುದಕ್ಕಾಗಲಿಲ್ಲ. ಅದೇ ಹಣ್ಣು ಕಾಯಿಗಳನ್ನು ಬಿಡುವ ಸ್ಥಿತಿಗೆ ಬಂದು ತಲುಪಿಬಿಟ್ಟಿತು. ಬೇರೆ ಕಡೆ ಹೋಗಿ ಬೆಳೆಯಬೇಕು ತನ್ನ ಬೀಜಗಳನ್ನ ಕಳುಹಿಸಬೇಕು ಅಂದುಕೊಳ್ಳುವಷ್ಟರಲ್ಲಿ ತನ್ನ ಸತ್ವವನ್ನೆಲ್ಲ ಕಳೆದುಕೊಂಡು ಬಿಟ್ಟಿತು. ಮರಕ್ಕೆ ಪಶ್ಚಾತಾಪವಾಗ ತೊಡಗಿತು. ಮನೆ ಯಜಮಾನ ಹೊಸ ಗಿಡದ ಬೀಜಗಳನ್ನು ಹುಡುಕಲು ಆರಂಭಿಸಿದ... ರೈತನಿಗೆ ಲಾಭವಾಗಬೇಕಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ