ಸ್ಟೇಟಸ್ ಕತೆಗಳು (ಭಾಗ ೮೭೪)- ಎಲ್ಲಿದೆ?
ಆ ಊರು ನಿಮಗೆ ಪರಿಚಯವಿರೋದೆ. ನಾನು ಆ ಊರಿನಲ್ಲಿ ಇತ್ತೀಚೆಗೆ ಒಮ್ಮೆ ಹಾದು ಹೋಗಿದ್ದೆ. ನಿಮಗೆ ಆ ಊರಿನ ಬಗ್ಗೆ ಹೇಳಬೇಕು, ಎಲ್ಲರೂ ವಿಷಯ ಎಲ್ಲಿ ಸಿಗುತ್ತೆ ಅಂತ ಹುಡುಕುವುದಕ್ಕೆ ಆರಂಭ ಮಾಡಿದ್ದಾರೆ. ಕೆಲವರು ಮನೆ ಒಳಗೆ ಕೂತು ಟಿವಿ ಒಳಗೆ ನೋಡ್ತಾರೆ, ಕೈಯಲ್ಲಿ ಹಿಡಿದ ಮೊಬೈಲ್ ನೋಡ್ತಾರೆ, ಕಡಿಮೆ ಜನ ಪುಸ್ತಕ ತೆಗೆದು ಓದ್ತಾರೆ, ಪೇಪರ್ ಗಳನ್ನು ಬಿಡಿಸುತ್ತಾರೆ. ಹೀಗೆ ಜನರಿಗೆ ವಿಶೇಷ ಹುಡುಕಾಡುತ್ತಿರುವಾಗ ಅದನ್ನು ನೋಡುವ ಹಾಗೆ ಮಾಡುವ ಕ್ಯಾಮೆರಾಗಳು ಎಲ್ಲಾ ಕಡೆ ಹೋಗ್ತಾ ಇಲ್ಲ. ಮಾತನಾಡುವುದಕ್ಕೆ ಬಳಸುವ ಮೈಕ್ ಗಳು ಎಲ್ಲಾ ಬಾಯಿಗಳ ಮುಂದೆ ಹಿಡಿತಾ ಇಲ್ಲ. ಅವರಿಗೆ ಬೇಕಾಗಿರುವ ಚಿತ್ರಗಳನ್ನು ಹಿಡಿದುಕೊಂಡು, ಯಾರು ಅವರಿಗೆ ಪೂರಕವಾಗಿ ಮಾತನಡ್ತಾರೋ ಅವರ ಮುಂದೆ ಮೈಕ್ ಹಿಡಿದುಕೊಂಡು ತಿರುಗಾಡುತ್ತಿರುತ್ತಾರೆ. ಜನರಿಗೆ ಸ್ಪೂರ್ತಿಯಾಗುವ ಸಂದೇಶ ಸಾರುವ ಮೌಲ್ಯ ತುಂಬುವ ವಿಚಾರಗಳು ಸಾವಿರ ನಡೆದರೂ ಕೂಡ ಅಲ್ಲಿಗೆ ಕ್ಯಾಮರಾಗಳನ್ನು ಹಿಡಿತಾನೇ ಇಲ್ಲ. ಆ ಜನರ ಮಾತನ್ನ ಕೇಳುತ್ತಾನೇ ಇಲ್ಲ. ಆ ಊರಿನಲ್ಲಿ ನೋವುಗಳು ಮನಸ್ಸಿನೊಳಗೆ ಹಾಗೆ ಉಳಿದುಕೊಂಡು ಬಿಟ್ಟಿದೆ. ಕ್ಯಾಮರಾ ಹಿಡಿದಿಟ್ಟುಕೊಂಡ ಕೈಗಳಿಗೆ ಮನಸ್ಸಿದ್ದರೂ ಅದನ್ನು ಹಿಡಿಸಿರುವ ಮನಸ್ಸುಗಳು ಕಲ್ಲಾಗಿವೆ. ಹಾಗಾಗಿ ಮಾಹಿತಿಗಾಗಿ ನೋಡ್ತಾ ಇರುವಂತಹ ಜನರಿಗೆ ಕಣ್ಣ ಮುಂದೆ ಕಾಣುವುದೇ ಸತ್ಯವಾಗಿ ಬಿಟ್ಟಿದೆ. ಹೇಳುತ್ತಿರುವ ವಿಚಾರಾನೇ ಅದ್ಭುತ ಅಂತ ಅನಿಸಿದೆ. ಹಾಗಾಗಿ ಇದ್ಯಾವುದು ಇಲ್ಲದೆ ಸತ್ಯವನ್ನ ಜನರ ಮುಂದೆ ಕಣ್ಣು ತೆರೆದು ತೋರಿಸುವಂತಹ ಊರನ್ನು ನನಗೆ ನೋಡಬೇಕಾಗಿದೆ. ಹಾಗಾಗಿ ಹೊಸ ವಿಳಾಸದ ಕಡೆಗೆ ಬಸ್ಸನ್ನ ಏರಿ ಹೊರಟುಬಿಟ್ಟಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ