ಸ್ಟೇಟಸ್ ಕತೆಗಳು (ಭಾಗ ೮೭೬)- ನಾಲಗೆ
ನನಗೆ ನಿಮ್ಮ ಮೇಲೆ ವಿಪರೀತವಾದ ಸಿಟ್ಟಿದೆ. ಕಾರಣ ನೀವು ಬರಹಗಾರರು ಮತ್ತು ಮಾತುಗಾರರು ಎನ್ನುವ ಕಾರಣಕ್ಕೆ. ಅಂದ್ರೆ ನೀವು ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವ ಕಾರಣಕ್ಕೆ ಸಿಟ್ಟಲ್ಲ. ನೀವು ಆಗಾಗ ಬರೆಯುವಾಗ ಮಾತನಾಡುವಾಗ ಒಂದು ಪದ ಬಳಸ್ತೀರಿ ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತೆ ಅಂತಾ? ಹೌದು ನಾನು ಒಪ್ಪಿಕೊಳ್ಳುತ್ತೇನೆ ನನಗೆ ಎಲುಬು ಇಲ್ಲ. ಆದರೆ ಮಾತು ತಪ್ಪೋದು ನನ್ನ ತಪ್ಪಲ್ಲ. ನನ್ನ ಕೆಲಸ ಆಹಾರವನ್ನು ಸರಿಯಾಗಿ ಜೀರ್ಣಿಸುವಂತೆ ಮಾಡುವುದಕ್ಕೆ ಒಂದಷ್ಟು ಸಹಕಾರವನ್ನು ನೀಡುವುದು, ನೀವು ಮಾತನಾಡಲು ಬಳಸುವ ಪದಗಳನ್ನು ಸರಿಯಾಗಿ ಮುಂದೆ ದಾಟಿಸುವುದು. ಆ ಪದಗಳನ್ನು ಯೋಚನೆ ಮಾಡುವ ಶಕ್ತಿ ನನಗಿಲ್ಲ. ಪದಗಳನ್ನು ಹುಟ್ಟಿಸುವ ಶಕಿಯೂ ಸಹ ನನಗಿಲ್ಲ. ನಿನ್ನ ಮನಸ್ಸಿನೊಳಗೆ ಏನೇನು ಯೋಚನೆಗಳನ್ನು ಜೋಡಿಸಿಕೊಳ್ಳುತ್ತೀಯಾ ಅಲ್ವಾ? ಅದನ್ನ ಮುಂದಿನವರಿಗೆ ದಾಟಿಸುವ ಕೆಲಸ ಮಾತ್ರ ನನ್ನದು. ಹಾಗಾಗಿ ಇನ್ನು ಮುಂದೆ ಎಲ್ಲಾದರೂ ಮಾತನಾಡುವಾಗ ನನ್ನನ್ನು ಎಲುಬಿಲ್ಲದ ನಾಲಗೆ ಎಲ್ಲದಕ್ಕೂ ನಾನೇ ಕಾರಣ ಅಂತ ಅಂದ್ರೆ ನಾನು ಮೌನವಾಗಿ ಬಿಡ್ತೇನೆ. ಹಾಗಾಗಿ ಮಾತಲ್ಲಿ ಮತ್ತು ಬರವಣಿಗೆಯಲ್ಲಿ ಇನ್ನು ಮುಂದೆ ಎಲ್ಲಾದರೂ ಎಲುಬಿಲ್ಲದ ನಾಲಗೆಯಿಂದ ಇದೆಲ್ಲಾ ಆಯಿತು ಅನ್ನೋದೇನಾದರೂ ಬಂದರೆ ಮುಂದೆ ನಿನ್ನನ್ನು ನೋಡಿಕೊಳ್ಳುತ್ತೇನೆ ಜಾಗೃತೆ... ಸಿಟ್ಟಿನ ಮಾತನ್ನಾಡಿ ಮೌನವಾಯಿತು ನನ್ನ ಬಾಯೊಳಗಿನ ನಾಲಗೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ