ಸ್ಟೇಟಸ್ ಕತೆಗಳು (ಭಾಗ ೮೭೭)- ವಿಳಾಸ

ಸ್ಟೇಟಸ್ ಕತೆಗಳು (ಭಾಗ ೮೭೭)- ವಿಳಾಸ

ಬೆಳ್ಳಿಪ್ಪಾದೆಯಾ ಕೆಳಗಿರುವ ಮಣ್ಣ ರಸ್ತೆಯನ್ನ ದಾಟಿ ಪುಟ್ಟಸಂಕವನ್ನು ಏರಿ ಒಂದು ಗದ್ದೆಯನ್ನ ದಾಟಿ ಮುಂದೆ ಸಿಗುವ ತೆಂಗಿನ ಮರದ ಕೆಳಗೆ ಕುಳಿತಿರುವ ಸೋಮಯ್ಯ ಅಜ್ಜನ ಬಳಿ ಮಾತನಾಡಿಸಬೇಕು. ಈ ಸೋಮಯ್ಯ ಅಜ್ಜ ಮಾತಿಗೆ ಸಿಗುವುದೇ ಕಡಿಮೆ. ಪ್ರತಿದಿನವೂ ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ನಾವು ಮಲಗುವ ಹೊತ್ತಾದರೂ ಅವರಿನ್ನು ಕಾಯಕದಲ್ಲಿ ಉಳಿದುಬಿಟ್ಟಿರುತ್ತಾರೆ. ನಾವು ಏಳುವುದಕ್ಕಿಂತ ಮೊದಲೇ ಮತ್ತೆ ಕಾಯಕಕ್ಕೆ ಶುರು ಹಚ್ಚಿಕೊಂಡಿರುತ್ತಾರೆ ಇಂಥವರ ಜೊತೆ ಮಾತುಗಳು ಹೊರಡುವುದೇ ಕಷ್ಟ. ಅಂತಹ ಅಜ್ಜ ಒಂದು ದಿನ ಮಾತಿಗೆ ಸಿಕ್ಕರು.

"ಮಗಾ ಅದೊಂದು ಅದ್ಭುತವಾದ ವಿಳಾಸ ಸಿಗಬೇಕು. ಮತ್ತೆ ತಿರುಗಿ ಯಾವ ಊರಿಗೂ ಹೋಗಬಾರದಂತಹ, ತಿರುಗಿ ಮತ್ತಿಲ್ಲಿಗೆ ಬಾರದಂತಹ ವಿಳಾಸವೊಂದು ಬೇಕು. ಒಮ್ಮೆ ಅಲ್ಲಿಗೆ ತಲುಪಿದ ಮೇಲೆ ಇನ್ನೊಂದು ಊರಿನ ವಿಳಾಸ ಕೇಳುವಂತಿರಬಾರದು ಆ ಊರನ್ನ ಬಿಟ್ಟು ಹೋಗುವ ಮನಸ್ಸು ಬರಬಾರದು. ಅಲ್ಲೇ ಜೀವನದ ಅದ್ಭುತ ಕ್ಷಣಗಳನ್ನು ಅನುಭವಿಸುವಂತಹ ಸ್ಥಿತಿಯು ಸಿಗುವಂತಹ ಊರೊಂದರ ವಿಳಸಬೇಕಾಗಿದೆ. ಹಲವು ಸಮಯದಿಂದ ಹುಡುಕುತ್ತಿದ್ದೇನೆ ನಿನಗೇನಾದರೂ ಗೊತ್ತಿದ್ರೆ ನನಗೆ ಆ ಒಂದು ವಿಳಾಸವನ್ನ ಕೊಟ್ಟುಬಿಡು ಮಗಾ"ಅಂತ ಪ್ರೀತಿಯಿಂದ ಕೇಳಿ ಕೆಲಸದ ಕಡೆಗೆ ನಡೆದೇಬಿಟ್ರು. ಅವರು ಹೇಳಿದ ಮಾತುಗಳು ಇಂದಿನವರೆಗೂ ಅರ್ಥ ಆಗ್ಲಿಲ್ಲ. ಆದರೆ ಅದರಲ್ಲಿ ಏನು ಅರ್ಥ ಇದೆ ಅಂತ ಪ್ರತಿದಿನವೂ ಕಣ್ಣು ಮುಚ್ಚಿ ಅರ್ಥ ಹುಡುಕುತ್ತಿದ್ದೇನೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ