ಸ್ಟೇಟಸ್ ಕತೆಗಳು (ಭಾಗ ೮೭೯)- ನಂಬಿಕೆ
ಯಾರ ಮನೆಗೆ ಯಾರು ಅತಿಥಿಗಳು ಈಗ. ಅದು ಯಾರೋ ದೊಡ್ಡವರು ಹೇಳಿದರು. ನಾವು ಈ ಭೂಮಿಗೆ ಅತಿಥಿಗಳಾಗಿ ಬಂದವರು ಇರೋದಕ್ಕೆ ಹೇಳಿದಷ್ಟು ದಿನ ಇದ್ದು ಹೊರಟು ಹೋಗಬೇಕು ಅಂತ. ಅದೇ ಪರಿಸ್ಥಿತಿ ಸ್ವಂತದ್ದಾದರೆ ಹೇಗಿರಬಹುದು? ಮನೆಯವರ ಬದುಕು ಚೆನ್ನಾಗಿರಬೇಕು ಮನೆ ಇನ್ನೊಂದಷ್ಟು ಹೆಚ್ಚು ಸಮಯ ನೆಮ್ಮದಿಯಿಂದ ಬದುಕಬೇಕು ಅಂತ ಅಂದ್ರೆ ನಾವು ಅತಿಥಿಗಳಾಗಬೇಕಾಗುತ್ತೆ. ನಮ್ಮದೇ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗೆ ಬಂದು ಮುಖ ತೋರಿಸಿ ಒಂದಷ್ಟು ಮಾತನಾಡಿಸಿ ಮತ್ತೆ ಮುಂಜಾನೆ ಬೇಗ ಎದ್ದು ಕೆಲಸದ ಕಡೆಗೆ ಓಡುವ ಧಾವಂತ ಇದೆಯಲ್ಲ ಅದು ಪ್ರತಿಸಲ ಕಣ್ಣಂಚಿನಲ್ಲಿ ನೀರನ್ನು ಸುರಿಸುತ್ತದೆ. ಹಬ್ಬಗಳೆಲ್ಲವೂ ಬರಿಯ ಮೊಬೈಲ್ ಒಳಗಿನ ಚಿತ್ರಗಳಾಗಿವೆ. ರಜಾ ದಿನಗಳಲ್ಲೂ ಹೊಸತೊಂದು ಕೆಲಸವನ್ನು ಹುಡುಕಿ ಸಾಲ ಒಂದಷ್ಟು ಬೇಗ ತೀರಲಿ ಎನ್ನುವಂತಹ ಭಾವ ಆಗಾಗ ಕಾಡುತ್ತದೆ. ಒಟ್ಟಿನಲ್ಲಿ ಸ್ವಂತ ಮನೆಗೆ ಅತಿಥಿಗಳಾಗಿರುವ ಪರಿಸ್ಥಿತಿ ನೋವನ್ನು ಕೊಡುತ್ತದೆ.
ಮನೆಯಲ್ಲಿ ಮಗನ ನೋಡಬೇಕೆನ್ನುವ ತುಡಿತ ಹೆಚ್ಚಾಗಿದ್ದರೂ ಕೂಡ ಪರಿಸ್ಥಿತಿಗಳು ರಸ್ತೆ ದಾಟುವುದಕ್ಕೆ ಬಿಡುವುದಿಲ್ಲ. ಇದು ಹಲವರನ್ನು ಕಾಡುವ ಬದುಕು, ಹಿಂದೆ ಅವರ ಕನಸಲ್ಲಿ ಕಾಡಿದ ಬದುಕಿದೆಯಲ್ಲ ಅದು ಸದ್ಯದಲ್ಲಿ ಹಾಗೆ ಕಾಣುತ್ತಲೇ ಇಲ್ಲ. ಹಾಗೆ ಕಾಡುತ್ತಾನೂ ಇಲ್ಲ, ಅತಿಥಿಗಳಾಗಿರುವ ಇವರು ಯಾವತ್ತೂ ಬದುಕನ್ನು ವಿರೋಧಿಸಿಲ್ಲ. ಪ್ರೀತಿಯಿಂದ ಸ್ವಾಗತಿಸಿ ಮುಂದೊಂದು ದಿನ ತಮ್ಮದೇ ಮನೆಯಲ್ಲಿ ಎಲ್ಲರ ಜೊತೆಗೆ ನಿಲ್ಲುತ್ತೇವೆ ಎನ್ನುವ ನಂಬಿಕೆಯಲ್ಲಿ ಇದ್ದಾರೆ. ಹಾಗೆ ಬರೆಯುತ್ತಿದ್ದ ಡೈರಿಯನ್ನು ಮುಚ್ಚಿಟ್ಟು ಕ್ಯಾಲೆಂಡರ್ ನಲ್ಲಿ ದಿನಗಳನ್ನು ಲೆಕ್ಕ ಹಾಕ್ತಾ ಇದ್ದಾನೆ. ಇನ್ನು ಮನೆಯ ಹೊಸ್ತಿಲನ್ನು ದಾಟುವ ದಿನ ಯಾವಾಗ ಬರುತ್ತೆ ಅಂತ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ