ಸ್ಟೇಟಸ್ ಕತೆಗಳು (ಭಾಗ ೮೭) - ಚಂದದ ಹುಡುಗಿ

ಸ್ಟೇಟಸ್ ಕತೆಗಳು (ಭಾಗ ೮೭) - ಚಂದದ ಹುಡುಗಿ

ಪಾದಗಳು ಚಪ್ಪಲಿ ಧರಿಸಿ ಮಾರ್ಗ ಬದಿ ಚಲಿಸುತ್ತಿದ್ದವು. ದಾರಿಯಲ್ಲಿ ಸಾಗುತ್ತಿದ್ದ ಹಲವು ಜೋಡಿ ಚಪ್ಪಲಿಗಳೆಲ್ಲವೂ ಅವಸರವಾಗಿದ್ದವು. ಅಲ್ಲೊಂದು ಬೆಳಕು ಬೀರಲೆಂದೇ ನಿಲ್ಲಿಸಿರುವ ವಿದ್ಯುತ್ ಕಂಬದ ಕೆಳಗೆ ಅವಳು ಕುಳಿತಿದ್ದಾಳೆ. ಅದು ಬೆಳಕು ಬೀರುವ ಶಕ್ತಿಯನ್ನು ಕಳೆದುಕೊಂಡಿತ್ತು. ಅವಳ ವಯಸ್ಸು ಹತ್ತರ ಒಳಗೆ. ಅವಳಿಗೆ  ತನ್ನವರು ಅನ್ನೋರು ಯಾರು ಇಲ್ಲದ ಕಾರಣ ಬೀದಿಗೆ ಬಂದಿದ್ದಾಳೋ ಅಥವಾ ತನ್ನವರನ್ನು ಉಳಿಸಲು ಬೀದಿಗಿಳಿದಿದ್ದಾಳೋ ಗೊತ್ತಿಲ್ಲ. ಅವಳು ಚಂದದ ಹುಡುಗಿ. ಆದರೆ ದುಃಖದ ಕಣ್ಣು, ಮಣ್ಣಾದ ಮುಖ, ದೇಹ, ಬಟ್ಟೆ ಅಂದವನ್ನ ಮರೆಮಾಚಿದರೂ ಮುದ್ದು ಹೊರಗಿಣುಕುತ್ತಿದೆ. ಕೈಯಲ್ಲೊಂದು ತಟ್ಟೆ ಹಿಡಿದು ಬೇಡುತ್ತಿದ್ದಾಳೆ. ಬಂಗಲೆಯ ಮನೆಗಲ್ಲ. ಒಂದು ದಿನದ ಹಸಿವಿಗೆ. ಅದೇ ರಸ್ತೆಯಲ್ಲಿ ಮೂರು ರಾಜಕಾರಣಿಗಳ ಮನೆ ಇದೆ, ದೊಡ್ಡದೊಂದು ಶಾಲೆ, ಸಮಾಜಸೇವಕರ ಕಚೇರಿ, ಸಂಘಟನೆಗಳ ಕಾರ್ಯಾಲಯ. ಶ್ರೀಮಂತರು ದಿನವೂ ಓಡಾಡುವ ಜಾಗ ಆದರೂ ಅವಳನ್ನು ಅಲ್ಲಿಂದ ಕರೆದುಕೊಂಡು ಒಳ್ಳೆಯ ಬದುಕು ಕಟ್ಟುವ ಮನಸ್ಸು ಯಾರಿಗೂ ಆಗಿಲ್ಲ ಅಥವಾ ಅದರಿಂದ ಪ್ರಸಿದ್ಧಿಗೆ ಬರುವುದಿಲ್ಲ ಅಂತನೂ ಆಗಿರಬಹುದು. ಅವಳಿನ್ನೂ ಬೇಡುತ್ತಿದ್ದಾಳೆ, ಆಫೀಸುಗಳು ಬಾಗಿಲು ತೆರೆದಿವೆ, ಶಾಲೆಯ ಗಂಟೆ ಬಡಿದಿದೆ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ