ಸ್ಟೇಟಸ್ ಕತೆಗಳು (ಭಾಗ ೮೮೧)- ದಾರಿ
ಅವನಿಗೆ ತುಂಬ ನೋವಾಗ್ತಾ ಇತ್ತು, ಯಾಕೆ ನನಗೆ ಸರಿಯಾಗಿದ ಮೌಲ್ಯ ಸಿಕ್ತಾ ಇಲ್ಲ. ನಾನು ಜನರ ನಡುವೆ ಗುರುತಿಸಿಕೊಳ್ಳಲು ಯೋಗ್ಯನಾಗಿದ್ದೇನೆ. ಹಾಗಿದ್ದರೂ ಕೂಡ ನನ್ನನ್ನ ಎಲ್ಲಾ ಕಡೆಗೂ ಕಡೆಗಣಿಸುತ್ತಿದ್ದಾರೆ ಯಾಕೆ ಹೀಗೆ? ಅನ್ನುವ ಪ್ರಶ್ನೆ ಆತನನ್ನ ಪದೇ ಪದೇ ಕಾಡ್ತಾ ಇತ್ತು. ಉತ್ತರ ಹುಡುಕ್ತಾ ಹೋದವನಿಗೆ ಆ ಸನ್ನಿವೇಶಗಳೇ ಉತ್ತರವನ್ನು ಕೊಡೋದಕ್ಕೆ ಆರಂಭ ಮಾಡಿದವು. ಊರಿನಲ್ಲಿ ಜಾತ್ರೆ ಆರಂಭವಾಗಿತ್ತು. ವರ್ಷಗಳಿಂದ ಕೋಣೆಯ ಮೂಲೆಯೊಳಗೆ ಧೂಳು ತಿನ್ನುತ್ತಾ ಬಿದ್ದಿದ್ದ ಅಲಂಕಾರಿಕ ವಸ್ತುಗಳಿಗೆ ದೇವಾಲಯದ ಪ್ರಾಂಗಣದ ಸೌಂದರ್ಯವನ್ನು ಇಮ್ಮಡಿಗೊಳಿಸುವ ಅವಕಾಶ ಸಿಕ್ಕಿತ್ತು. ಗೋಣಿಯೊಳಗೆ ಕಟ್ಟಿ ನಿಂತಿದ್ದ ಬಾವುಟದ ಬಟ್ಟೆಗಳನ್ನ ಸುಂದರಗೊಳಿಸಿ ಕತ್ತರಿಸಿ ರಥದ ಮೇಲೆ ಒಪ್ಪವಾಗಿ ಜೋಡಿಸಿದ್ದರು. ಬೆಳಕು ಕೊಡಬೇಕೆಂದು ಕಾಯುತ್ತಿದ್ದ ಸಣ್ಣ ಸಣ್ಣ ಬೆಳಕಿನ ದೀಪಗಳೆಲ್ಲವೂ ದೇವಾಲಯದ ಸುತ್ತಲೂ ಊರ ಬೀದಿಗಳಲ್ಲಿ ಮಿನುಗುವುದಕ್ಕೆ ಆರಂಭವಾದವು. ಎಲ್ಲವೂ ಕೂಡ ತಮ್ಮ ಇರುವಿಕೆಯನ್ನು ಜಗತ್ತಿಗೆ ತೋರಿಸಿದವು. ಆದರೆ ಇಷ್ಟು ಸಮಯದವರೆಗೆ ಅದಕ್ಕೆ ಕಾಯಲೇಬೇಕಾಗಿತ್ತು. ಅಂತಹ ವಸ್ತುಗಳೇ ಕಾದು ತಮ್ಮ ನೆಲೆಯನ್ನ ಕಂಡುಕೊಳ್ಳುವಾಗ ನಾನು ಯಾಕೆ ಇನ್ನೊಂದಷ್ಟು ಸಮಯ ಹೆಚ್ಚು ಕಾಯ್ಬಾರ್ದು ಅನ್ನುವ ಯೋಚನೆ ಅವನೊಳಗೆ ಹಾಗೆ ಗಟ್ಟಿಯಾಗಿ ನಿಂತುಬಿಟ್ಟಿತು. ಯೋಚನೆಯನ್ನು ಧಾರೆಯೆರೆದ ಭಗವಂತನಿಗೆ ಕೈ ಮುಗಿದು ನಗುತ್ತಾ ಸಂಭ್ರಮದಿಂದ ಮನೆಯ ಕಡೆಗೆ ಹೊರಟುಬಿಟ್ಟ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ