ಸ್ಟೇಟಸ್ ಕತೆಗಳು (ಭಾಗ ೮೮೩)- ಪಶ್ಚಾತ್ತಾಪ

ಸ್ಟೇಟಸ್ ಕತೆಗಳು (ಭಾಗ ೮೮೩)- ಪಶ್ಚಾತ್ತಾಪ

ಹೊಸದೊಂದು ಕೊಠಡಿಯ ಒಳಗಡೆ ಪಶ್ಚಾತಾಪ ಪಡುವವರಿಗೆ ಮಾತ್ರ ಎಂದು ಬೋರ್ಡ್ ನೇತು ಹಾಕಲಾಗಿದೆ. ಆಲ್ಲಿ ಸ್ಥಳಾವಕಾಶದ ಕೊರತೆಯಿಂದ ಇನ್ನೊಂದಷ್ಟು ಕೊಠಡಿಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪಶ್ಚಾತಾಪ ಅನ್ನೋದು ಸಂಜೆ ಹೊತ್ತಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಾಗ ಸೊಳ್ಳೆಗಳು ಒಳಗೆ ನುಸುಳುತ್ತವೋ ಹಾಗೆ ಆಲೋಚನೆಗಳು ಮನಸ್ಸಿನೊಳಗೆ ಗುಂಯ್ ಗುಡೋದ್ದಕ್ಕೆ ಆರಂಭವಾಗುತ್ತವೆ. ಅಲ್ಲಿ ಕುಳಿತವರ ಒಂದಷ್ಟು ಪಶ್ಚಾತಾಪದ ಮಾತುಗಳನ್ನ ನಾನು ಕೇಳಿದ್ದೆ "ಅವತ್ತು ಅವರು ದಾರಿಯಲ್ಲಿ ನಡೆದುಕೊಂಡು ಬರ್ತಾ ಇರುವಾಗ ಮರದ ಕೆಳಗೆ, ಯಾರೋ ಒಬ್ಬರು ಕುಳಿತಿದ್ದರು. ನೋಡಿಯೂ ನೋಡದಂತೆ ಇವರು ಮುಂದುವರೆದರು. ಮರುದಿನ ಬೆಳಗ್ಗೆ ಆ ವ್ಯಕ್ತಿ ಹಸಿವಿನಿಂದ ಸತ್ತ ಸುದ್ದಿಯನ್ನು ಇವರು ಕೇಳಿದ್ದರು." "ದಾರಿ ಬದಿಯಲ್ಲಿ ಒಬ್ಬರು ಸ್ವಲ್ಪ ದೂರದವರೆಗೆ ಕರೆದುಕೊಂಡು ಹೋಗಿ ಅಂತ ಕೇಳಿದಾಗ ಆಗುವುದಿಲ್ಲ ಅಂತ ಹೇಳಿ ಬಂದವರಿಗೆ ಮನೆಗೆ ಬಂದ ಮೇಲೆ ಗೊತ್ತಾಗಿರೋದು ಅವರ ಮನೆಯಲ್ಲಿ ತುರ್ತಾದ ಕೆಲಸವೊಂದಿತ್ತು ಅವರು ತಡವಾಗಿ ಬಂದಿರುವುದಕ್ಕೆ ಅವರ ಇಂದಿನ ಜೀವನ ತುಂಬಾ ಕಷ್ಟದಲ್ಲಿದೆ ಅಂತ" "ಬಸ್ ನಿಲ್ದಾಣದಲ್ಲಿ ಆ ದಿನದ ಅಗತ್ಯಕ್ಕೆ ಖರ್ಚಿಗೊಂದಿಷ್ಟು ಕೊಡಿ ಅಂತ ಕೇಳೋಕೆ ಬಂದವರನ್ನು, ನಿಮ್ಮಂತವರನ್ನ ಸಾವಿರ ನೋಡಿದ್ದೇವೆ ಅಂತ ತಳ್ಳಿದವರಿಗೆ ಆಮೇಲೆ ತಿಳಿದದ್ದು ಸಹಾಯ ಮಾಡಿದಿದ್ದರೆ ಆಸ್ಪತ್ರೆಯಲ್ಲಿರುವ ಅವರ ಮಗನ ಮುಖವನ್ನಾದರೂ ನೋಡಬಹುದಿತ್ತು ಅನ್ನೋದು. ಇಂತಹ ಹಲವು ಕಥೆಗಳು ಘಟಿಸಿದ ಮೇಲೆ ಪಶ್ಚಾತಾಪದ ಕೂಪದಲ್ಲಿ ಮಾನಸಿಕವಾಗಿ ಎಲ್ಲರೂ ಆ ಕೊಠಡಿಯೊಳಗಡೆ ನರಳುತ್ತಿದ್ದಾರೆ.  ದುಡುಕಿನಿಂದ ದೂರಾದ ಮಗಳು, ನೋವುಂಡ ತಂದೆ, ಬೇಸರಿಸಿಕೊಂಡ ಗುರುಗಳು, ವ್ಯಥೆ ಅನುಭವಿಸಿದ ವಿದ್ಯಾರ್ಥಿಗಳು ಇವರೆಲ್ಲರ ಹಾಗೆ ಪಶ್ತಾತಾಪದ ಒಳಗೆ ಬೇಯುವುದಕ್ಕಿಂತ ಆ ಕ್ಷಣದಲ್ಲಿ ಕೈಲಾದ ಸಹಾಯ ಮಾಡಿ, ಒಂದಷ್ಟು ವಿವೇಚನೆಯಿಂದ ಮಾತನಾಡಿ ನಿರಾಳರಾಗೋದು ಒಳ್ಳೆಯದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ