ಸ್ಟೇಟಸ್ ಕತೆಗಳು (ಭಾಗ ೮೮೫)- ತಪ್ಪು

ಸ್ಟೇಟಸ್ ಕತೆಗಳು (ಭಾಗ ೮೮೫)- ತಪ್ಪು

ತಪ್ಪು ಹಲವು ಸಮಯದಿಂದ ದಾರಿ ಗೊತ್ತಾಗದೆ ಅಡ್ಡಾದಿಡ್ಡಿಯಾಗಿ ಓಡಾಡ್ತಾ ಇದೆ. ಅದನ್ನ ಯಾರು ಕೂಡ ಧೈರ್ಯವಾಗಿ ಒಪ್ಪಿಕೊಳ್ಳದೇ ಇರುವುದಕ್ಕೆ ತಪ್ಪು ಬೇಸರಿಸಿಕೊಂಡಿದೆ. ತಪ್ಪನ್ನು ಮಾಡುವಾಗ ಇರುವ ಧೈರ್ಯ ತಪ್ಪನ್ನ ಒಪ್ಪಿಕೊಳ್ಳುವಾಗ ಇರದಿದ್ದನ್ನ ನೋಡಿ ತಪ್ಪಿಗೆ ತನ್ನ ಬಗ್ಗೆ ತನ್ನನ್ನು ಉಪಯೋಗಿಸಿಕೊಳ್ಳುತ್ತಿರುವವರ ಬಗ್ಗೆ ಅಸಹ್ಯ ಹುಟ್ಟುತ್ತಿದೆ. ತಪ್ಪು ಯೋಚಿಸುವುದೇನೆಂದರೆ, ಕೆಲವು ಸಲ ತಿಳಿಯದೇ ತಪ್ಪಾಗುತ್ತದೆ,  ಕೆಲವೊಂದು ಸಲ ಸರಿಯೋ ತಪ್ಪು ಅನ್ನುವುದನ್ನು ತಿಳಿದು ಕೂಡ ಮುಂದುವರೆಯುತ್ತಾರೆ. ಹಾಗಿದ್ದಾಗ ತಪ್ಪು ಮಾಡಿಯೋ ಅದು ತಪ್ಪು ಅನ್ನೋದನ್ನ ಒಪ್ಪಿಕೊಳ್ಳುವುದಕ್ಕೆ ಇವರಿಗೆ ಏನು ದಾಡಿ. ಜನರಿಗೆ ತೊಂದರೆ ಮಾಡಿದ್ದೇವೆ ಅಂದಮೇಲೆ ಹೌದು ತೊಂದರೆ ಮಾಡಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಲಿ, ಮೋಸ ಮಾಡಿದ್ದೇವೆ ಅಂದರೆ ಅದು ತಪ್ಪು ಅಂತ ಬಿಂಬಿತವಾದ ಮೇಲೆ ಅದನ್ನು ಒಪ್ಪಿಕೊಳ್ಳದೆ ಜಾರುವುದಲ್ಲ, ಸಮಜಾಯಿಸಿ ಕೊಡುವುದು ಇದಿಯಲ್ಲ ಇದು ತಪ್ಪಿಗೆ ಬಹಳ ಬೇಸರವೆನಿಸಿದೆ. ತನ್ನನ್ನು ಕೈಗೊಂಡ ಮೇಲೆ ತನ್ನ ಹೆಸರನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದ ಜನರ ನಡುವೆ ಬದುಕುವುದನ್ನು ಬೇಸರಿಸಿದೆ. ಇತ್ತೀಚಿಗಂತೂ ಹೆಚ್ಚಿನವರು ತಪ್ಪನ್ನ ಬಳಸಿದ್ದರೂ  ಯಾರು ಕೂಡ ತಪ್ಪಿಗೆ ಗೌರವವನ್ನು ಕೊಡುತ್ತಿಲ್ಲ .ಹಾಗಾಗಿ ತಪ್ಪು ಬೇಸರಿಸಿಕೊಂಡಿದೆ. ಘಟನೆಯೊಂದು ಘಟಿಸಿಯಾದ ಮೇಲೆ ಅದು ಸರಿ ತಪ್ಪು ಎಂದು ತೀರ್ಮಾನವಾದ ಮೇಲೆ ತಪ್ಪಿದ್ದರೆ ತಪ್ಪು ಎಂದು ಒಪ್ಪಿಕೊಳ್ಳಿ ದೊಡ್ಡ ಸಮಸ್ಯೆಗಳು ನಿಧಾನವಾಗಿ ಕರಗಿ ಹೋಗುತ್ತವೆ. ಅಂತಹ ಧೈರ್ಯ ಇರುವವರನ್ನು ಇನ್ನು ಕೂಡ ತಪ್ಪು ಹುಡುಕುತಿದೆ ಎಲ್ಲೂ ಸಿಗುತ್ತಿಲ್ಲ.. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ