ಸ್ಟೇಟಸ್ ಕತೆಗಳು (ಭಾಗ ೮೮೬)- ಬಲಿಪಶು
ಸತತವಾಗಿ ಹುಡುಕಾಟ ಆರಂಭವಾಗಿದೆ, ಬಲಿಪಶುಗಳಿಗಾಗಿ. ಬಲಿಬಶುಗಳು ಪ್ರಶ್ನೆ ಮಾಡಬಾರದು, ಅನುಸರಿಸಬೇಕು. ಕೊನೆಯ ಕ್ಷಣದಲ್ಲಿ ಪ್ರಾಣ ಹೋದರು ತಮ್ಮ ಕುಟುಂಬ ಬೀದಿಗೆ ಬಿದ್ದರೂ ಮನೆಯಲ್ಲಿ ಕಷ್ಟ ಪಡುವಂತಹ ಯಾರೇ ಇದ್ದರೂ ಕೂಡ ತಮ್ಮ ದೊರೆ ಹೇಳಿದ ಮಾತಿಗೆ ತಲೆ ತಗ್ಗಿಸಿ ವಿಪರೀತ ಹುಚ್ಚಾಟ ಮಾಡುವವರು ಬೇಕಾಗಿದ್ದಾರೆ .ಯಾಕೆ ಈ ಕಾರ್ಯ ಮಾಡುತ್ತಿದ್ದೇನೆ ಎನ್ನುವ ಅರಿವಿಲ್ಲದವರು, ಅನಗತ್ಯವಾಗಿ ದೊಂಬಿ ಗಲಾಟೆಗಳನ್ನ ಎಬ್ಬಿಸುವವರು, ನ್ಯಾಯ ನೀತಿ ಯಾವುದನ್ನು ಯೋಚಿಸದೆ ಕೇವಲ ಕಿವಿಯಲ್ಲಿ ಕೇಳಿದ ಮಾತುಗಳಿಗೆ ಉಗ್ರ ರೂಪ ತಾಳುವವರು, ಕಲ್ಲು ಬಿಸಾಡುವವರು, ಯಾರನ್ನಾದರೂ ಸಾಯಿಸುವವರು, ಮೋಸ ಮಾಡುವವರು, ಆಗಾಗ ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಲ್ಲಿ ಬಂದು ಜಾತಿ ಧರ್ಮದ ವಿಚಾರವಾಗಿ ಬೊಬ್ಬೆ ಹೊಡೆಯುವವರು, ಈ ಎಲ್ಲಾ ಗುಣಲಕ್ಷಣಗಳು ಹೊಂದಿರುವವರು ಬೇಕಾಗಿದ್ದಾರೆ. ಇಲ್ಲಿ ಯಾವುದೇ ರೀತಿಯ ಸಂಭಾವನೆ ಸಿಗುವುದಿಲ್ಲ. ಆದರೆ ಅವರ ಮರಣದ ನಂತರ ಅಲ್ಲಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನ ಬ್ಯಾನರ್ ಗಳನ್ನು ಹಾಕಲಾಗುವುದು, ಕೆಲವು ದಿನಗಳಲ್ಲಿ ಮರೆತು ಬಿಡಲಾಗುವುದು. ಕುಟುಂಬದ ಪರಿಸ್ಥಿತಿ ಎಷ್ಟೇ ಚಿಂತಾಜನಕವಾಗಿದ್ದರೂ ಅನಗತ್ಯವಾಗಿ ತಿರುಗಾಡುತ್ತಿರುವವರು ಬೇಕಾಗಿದ್ದಾರೆ. ಹಾಗಾಗಿ ಹುಡುಕಾಟದ ಒಂದಷ್ಟು ತಂಡಗಳು ಬಲಿಪಶುಗಳಿಗಾಗಿ ಹುಡುಕಾಡುತ್ತಿದ್ದಾರೆ. ದಯವಿಟ್ಟು ನಮ್ಮ ಮನೆಯ ಮಕ್ಕಳನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದಾಗಿದೆ. ಎಚ್ಚರಿಕೆಯಿಂದ ಇರಿ ಕಳ್ಳರಿದ್ದಾರೆ ಬಲಿಪಶುಗಳನ್ನ ಹುಡುಕುವ ಕಳ್ಳರಿದ್ದಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ