ಸ್ಟೇಟಸ್ ಕತೆಗಳು (ಭಾಗ ೮೮೭)- ರೀತು

ಸ್ಟೇಟಸ್ ಕತೆಗಳು (ಭಾಗ ೮೮೭)- ರೀತು

ಅಮ್ಮ ನನಗೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ. ನಿಜ ಹೇಳಬೇಕು ಅಂತ ಅಂದ್ರೆ ತುಂಬಾ ನೋವಾಗ್ತಾ ಇದೆ. ಆದರೆ ಇಷ್ಟು ಜನರ ಮುಂದೆ ನಾನು ಅತ್ತು ಬಿಟ್ಟರೆ... ನೀವೆಲ್ಲರೂ ನನ್ನನ್ನ ಸಮಾಧಾನ ಮಾಡೋಕೆ ಅಂತ ಬರುತ್ತೀರಿ, ಆಗ ಆ ದಿನದ ನಾಟಕ ತಯಾರಿ ಕಷ್ಟ ಆಗೋದಿಲ್ವಾ? ಅದಕ್ಕೆ ಸುಮ್ಮನಿದ್ದೆ. ನಾನು ಆ ದಾರಿಯಲ್ಲಿ ಓಡಿ ಬಂದವಳಲ್ಲ, ಆ ವೇದಿಕೆ ಪಕ್ಕದಲ್ಲಿ ಕಲ್ಲಿದೆ ಅನ್ನೋದು ಕೂಡ ನನಗೆ ಗೊತ್ತಿತ್ತು. ಆದರೆ ನಿನ್ನೆ ಬಿದ್ದಾಗ ಆದ ಗಾಯ ಮತ್ತು ಒಳಗಿನ ನೋವು ನನ್ನೊಳಗೆ ಅಳುವನ್ನ ಹೆಚ್ಚಿಸುತ್ತಾನೆ ಇತ್ತು. ನನ್ನ ನಗುವಿಗೋಸ್ಕರ ಸುತ್ತಮುತ್ತಲಿನವರು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಪಡ್ತಾ ಇದ್ರು. ನನಗೆ ಅದನ್ನು ನೋಡಿ ಇಲ್ಲ ನಾನು ಅಳಬಾರದು ಅಂತ ಅನ್ನಿಸ್ತು. ನಾನು ಅತ್ತರೆ  ಅಮ್ಮ ನೀನು ಹೇಗೂ ಅಳುತ್ತೀಯಾ. ಅದಲ್ದೆ ನೀನು ಇಡೀ ದಿನ ಮತ್ತೆ ಬೇಸರದಲ್ಲಿ ಇರ್ತಿಯ. ಹಾಗಾಗಿ ಒಂದಷ್ಟು ನೋವು ತಿಂದೆ ನಾನು. ನಾನು ರಂಪ ಮಾಡಿದಾಗ ಇಡೀ ಸುತ್ತಮುತ್ತಲಿನ ವಾತಾವರಣವೇ ಹಾಳಾಗುತ್ತೆ. ಅಮ್ಮ ನನಗೀಗ ಅರ್ಥ ಆಗಿದೆ ನಾವು ವರ್ತಿಸುವ ರೀತಿ ಇದೆಯಲ್ಲ ಅದು ನಮ್ಮ ಸುತ್ತಮುತ್ತಲಿನ ಹಲವರ ಮೇಲೆ ಬೇರೆ ಬೇರೆ ರೀತಿಯ ಪ್ರಭಾವ ಬೀರುತ್ತೆ ಅಂತ. ಹಾಗಾಗಿ ನಾನರ್ಥ ಮಾಡಿಕೊಂಡಿದ್ದೇನೆ ಎಲ್ಲಿ ಹೇಗಿರಬೇಕು ಅಂತ. ಇದು ತಪ್ಪಲ್ಲ ಅಲ್ವಾ ಅಮ್ಮ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ