ಸ್ಟೇಟಸ್ ಕತೆಗಳು (ಭಾಗ ೮೮೮)- ಆತ

ಸ್ಟೇಟಸ್ ಕತೆಗಳು (ಭಾಗ ೮೮೮)- ಆತ

ಯಾವತ್ತಿದ್ರೂ ಜೊತೆಗಿರ್ತೀನಿ ಅನ್ನೋ ಮಾತು ದೊಡ್ಡದೇನಲ್ಲ. ಆದರೆ ಅದನ್ನ ಹೇಳಿದ ಕ್ಷಣದಿಂದ ಇಂದಿನವರೆಗೂ ಆತ ಅವಳ ಜೊತೆಗೆ ಗಟ್ಟಿಯಾಗಿ ನಿಂತಿದ್ದ. ಆಕೆಯ ಶಿಕ್ಷಣ ಮುಗಿಯುವ ಹಂತದಲ್ಲಿತ್ತು. ಮನೆಯವರು ಹುಡುಗನನ್ನು ನೋಡಿದರು. ಮದುವೆಯೂ ಆಗಿ ಹೋಯಿತು. ಆದರೂ ಓದು ನಿಲ್ಲಲಿಲ್ಲ. ಶಿಕ್ಷಣ ಮುಗಿಯಿತು ಕೆಲಸವೂ ಆರಂಭವಾಯಿತು. ಓದಿಗೂ ತನ್ನ ಜೊತೆಗಿರ್ತೀನಿ ಅಂದವ ಗಟ್ಟಿಯಾಗಿ ನಿಂತಿದ್ದ. ಕೆಲಸದಲ್ಲಷ್ಟೇನೂ ಮನಸ್ಸು ತೃಪ್ತಿ ಸಿಗದೇ ಇರುವ ಕಾರಣ ಕೆಲಸ ಬಿಡ್ತೇನೆ ಅಂದಾಗಲೂ ಆತ ಪ್ರೀತಿಯಿಂದ ಸ್ವಾಗತಿಸಿದ್ದ. ಇಷ್ಟವಾಗಿರುವುದನ್ನು ಏನಾದರೂ ಮಾಡಲೇ ಬೇಕು ಅನ್ನುವ ತೀರ್ಮಾನ ಅವಳದಾಗಿತ್ತು. ಚಿಕ್ಕಂದಿನಿಂದ ಆಕೆಗೆ ವೇದಿಕೆಯ ಮೇಲೆ ಅಭಿನಯಿಸುವುದು ತುಂಬಾ ಇಷ್ಟ. ಸಣ್ಣ ಪುಟ್ಟ ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದವಳಿಗೆ ದೊಡ್ದ ದೊಡ್ಡದೊಡ್ಡ ವೇದಿಕೆಗಳು ಕರೆಯಲಾರಂಭಿಸಿದವು.

ಆತ ಇನ್ನೂ ಕೈಯನ್ನ ಗಟ್ಟಿಯಾಗಿ ಹಿಡಿದು ಆಕೆಯ ಕನಸಿಗೆ ಸ್ಪೂರ್ತಿಯಾಗಿ ನಿಂತ. ಪಯಣ ಆರಂಭವಾಯಿತು. ಸಣ್ಣ ಸಣ್ಣ ವೇದಿಕೆಗಳಿಂದ ದೊಡ್ಡ ದೊಡ್ಡ ವೇದಿಕೆಗಳು ಹೀಗೆ ಎಲ್ಲಾ ಕಡೆಯೂ ಮನೆಮಾತಾದಳು. ಆತ ಮತ್ತೆ ನಾಟಕದ ಜೊತೆಗೆ ಓದುವಿಕೆಯ ಬಗ್ಗೆ ಕನಸನ್ನು ತುಂಬಲಾರಂಭಿಸಿದ. ಆಕೆಗೂ ಹೌದೆನ್ನಿಸಿತು. ನಾಟಕ ಓದುವಿಕೆಯ ಕ್ಷಣದಲ್ಲಿ ಮನೆಯನ್ನು ನಿಭಾಯಿಸಬೇಕು, ಮಗುವನ್ನು ನಿಭಾಯಿಸಬೇಕು ಅವತ್ತು ಜೊತೆಗೆ ಇರ್ತೀನಿ ಅಂದವ ಆಗಲೂ ಜೊತೆಗೆ ನಿಂತಿದ್ದ. ತನ್ನ ಮಗುವಿಗೆ ಅಮ್ಮನೂ ಅಪ್ಪನೂ ಎರಡೂ ಆಗಿ ಮನೆಯನ್ನು ನಿಭಾಯಿಸಲಾರಂಭಿಸಿದ. ಅವಳ ಕನಸಿಗೆ ಇನ್ನೊಂದಷ್ಟು ನೀರು ಗೊಬ್ಬರಗಳನ್ನು ಹಾಕಿ ಆಕೆ ದೊಡ್ಡ ಮರವಾಗುವವರೆಗೂ ಆತ ಕಾಯುತ್ತಿದ್ದ. ಆಕೆ ತನ್ನ ಶಿಕ್ಷಣದ ಸಂಬಂಧ ಕೆಲಸಗಳನ್ನು ಮಾಡುವಾಗ ಪಕ್ಕದಲ್ಲಿ ಕುಳಿತು ಆಕೆಗೊಂದಿಷ್ಟು ಸಹಾಯ ಮಾಡುತ್ತಿದ್ದ. ಒಂದು ದಿನವೂ ಕಣ್ಣರಳಿಸಿ ಜೋರು ಮಾತಿನಿಂದ ಗದರಿದವನಲ್ಲ. ಆತ ತನ್ನ ಜೀವನದಲ್ಲಿ ಬಂದಿರುವುದು ತಾನು ಹಿಂದಿನ ಜನ್ಮದಲ್ಲಿ ಸಂಪಾದಿಸಿದ ಪುಣ್ಯದಿಂದ ಅನ್ನೋದು ಅವಳ ಯೋಚನೆ. ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆಗಾಗ ಕಣ್ಣೀರಾಗುತ್ತಾಳೆ. ಆತ ಆಕೆ ಅಭಿನಯಿಸಿ ಬರುವಾಗ ರಾತ್ರಿ ಹೊತ್ತಾದರೂ ಕೂಡ ಬಾಗಿಲ ಮುಂದೆ ಕಾಯುತ್ತಿರುತ್ತಾನೆ. ಯಾಕೆಂದರೆ ಆತ ಅಂದು ಹೇಳಿದ್ದ ನಾನು ನಿನ್ನ ಜೊತೆಗೆ ಸದಾ ಇರುತ್ತೇನೆ ಅಂತ. ಆತ ಮಾತು ಉಳಿಸಿಕೊಂಡಿದ್ದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ