ಸ್ಟೇಟಸ್ ಕತೆಗಳು (ಭಾಗ ೮೯೦)- ಸುಡುವಿಕೆ

ಸ್ಟೇಟಸ್ ಕತೆಗಳು (ಭಾಗ ೮೯೦)- ಸುಡುವಿಕೆ

ಓ ಮಾರಾಯ ನಿನಗೆ ಯಾಕೆ ಇನ್ನೂ ಅರ್ಥ ಆಗ್ಲಿಲ್ಲ. ಕಾಲ ಬದಲಾಗಿದೆ. ಮೊದಲೆಲ್ಲಾ ಚಳಿ ಕಾಯಿಸಿಕೊಳ್ಳುವುದಕ್ಕೆ ಒಂದು ಕಡೆ ಬೆಂಕಿ ಹಚ್ಚಿಸುತ್ತಾ ಕುಳಿತುಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಅಷ್ಟೇನೂ ಚಳಿ ಇಲ್ಲದ ಕಾರಣ ಕೆಲವೊಂದಷ್ಟು ಜನರ ಸುತ್ತಮುತ್ತ ಜನ ಸೇರುತ್ತಿದ್ದಾರೆ. ಆ ಪಟ್ಟಿಯಲ್ಲಿ ನೀನು ಇದ್ದೀಯಾ ಅಂತ ಮೊದಲು ಯೋಚನೆ ಮಾಡು. ಮೈ ಕಾಯಿಸಿಕೊಳ್ಳುವುದಕ್ಕೆ ತುಂಬಾ ಜನ ಹತ್ರ ಬರ್ತಾರೆ ಅವರ ಮೈ ಕಾಯಿ ಬೇಕು ಅಂತಿದ್ರೆ ನೀನು ಸುಡ್ಲೇಬೇಕಾಗುತ್ತೆ. ನಿನ್ನಿಂದ ಮೈ ಕಾಯಿಸಿಕೊಂಡ ಅವರು ಇನ್ನೊಂದಷ್ಟು ಹೆಚ್ಚು ವರ್ಷ ಬದುಕುತ್ತಾರೆ. ನಿನಗೆ ನೀನು ಸುಡುತ್ತಾ ಇರೋದು ಅರಿವಾಗುವುದಿಲ್ಲ. ಸುಟ್ಟು ಸುಟ್ಟು ಒಂದು ದಿನ ಬೂದಿಯಾಗಿ ಹೋಗುವಾಗ ಅವರು ಚಳಿ ಕಾಯಿಸಿಕೊಳ್ಳುವುದಕ್ಕೆ ಇನ್ನು ಯಾರನ್ನೋ ಹುಡುಕುತ್ತಾರೆ. ಅಂತೂ ಅವರು ಹೆಚ್ಚು ವರ್ಷ ಬದುಕುವುದಕ್ಕೆ ಯೋಚನೆಗಳನ್ನು ಮಾಡ್ತಾ ಇದ್ರೆ ನೀನು ಮಾತ್ರ ದೇಹ ಸುಟ್ಟುಕೊಂಡು ಅವರ ಚಳಿ ಕಡಿಮೆಯಾಗುವುದಕ್ಕೆ ನಿನ್ನನ್ನು ಅರ್ಪಿಸಿಕೊಳ್ಳುತ್ತಿರುತ್ತೀಯಾ. ಬೆಂಕಿ ಸುಟ್ಟಾಗ ಅರಿವಾಗಬಹುದು. ಆದರೆ ನೀನು ಮಾಡುವ ಕೆಲಸ, ಶ್ರಮ ಯೋಚನೆ, ಇವೆಲ್ಲವೂ ಕೂಡ ಇನ್ಯಾರದೋ ಮೈ ಕಾಯಿಸಿಕೊಳ್ಳುವುದಕ್ಕೆ ಬಳಕೆಯಾಗುತ್ತಾ ಇದೆ ಅಂತ ಅಂದ್ರೆ ಎಚ್ಚರ ವಹಿಸಬೇಕಾದ್ದು ನಿನ್ನ ಜವಾಬ್ದಾರಿ ತಾನೇ. ಹಾಗಾಗಿ ಯೋಚನೆ ಮಾಡು, ನಿನ್ನೊಳಗೆ ಸುಡುತ್ತಿರುವ ಬೆಂಕಿ ನಿನ್ನ ದಾರಿಗೆ ಬೆಳಕೊ ಆಥವಾ ಇನ್ಯಾರೋ ದಾರಿಗೋ ಬೆಳಕೊ ಅನ್ನುವುದನ್ನ. ಹಾಗೆ ದಾರಿಯಲ್ಲಿ ಹಾದು ಹೋಗುತ್ತಿದ್ದವರು ನನ್ನ ಕೈ ಹಿಡಿದು ಇಷ್ಟೆಲ್ಲ ಮಾತುಗಳನ್ನಾಡಿ ಹೊರಟೇ ಬಿಟ್ರು. ಅವರಿಗೆ ಯಾರಲ್ಲೋ ಹೇಳುವ ಮಾತು ಉಳಿದಿತ್ತೋ ಅಥವಾ ನನ್ನಲ್ಲೇ ಹೇಳಬೇಕಿತ್ತೋ ಗೊತ್ತಿಲ್ಲ. ಮಾತಿನಲ್ಲಿ ಅರ್ಥ ಇದೆ ಅಂತ ಎಣಿಸಿ ಮಾತುಗಳನ್ನ ಮನಸ್ಸಿನ ಜೋಳಿಗೆ ಒಳಗೆ ತುಂಬಿಸಿಕೊಂಡೆ. ಇಂದಲ್ಲದಿದ್ದರೂ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ