ಸ್ಟೇಟಸ್ ಕತೆಗಳು (ಭಾಗ ೮೯೪)- ಭಯ

ದಾರಿಯ ತುಂಬೆಲ್ಲ ಭಯವೂ ಓಡಾಡುತ್ತಿದೆ. ಇದು ಕಾಲ ನಿರ್ಣಯವೋ ಪರಿಸ್ಥಿತಿಯ ಕೈಗೊಂಬೆಯೋ ಒಂದೂ ತಿಳಿಯುತ್ತಿಲ್ಲ. ಹಾಗೆ ನೆಮ್ಮದಿಯ ಕನಸೊಳಗೆ ಬದುಕ ಸಾಗಿಸುತ್ತಿದ್ದವರ ಜೀವನದಲ್ಲಿ ಭಯವು ಬಂದು ಯಾವಾಗ ನಿಲ್ಲುತ್ತದೋ. ಭಯವನ್ನ ಓಡಿಸಿ ನೆಮ್ಮದಿಯನ್ನ ದಾರಿಗೆ ತಂದು ನಿಲ್ಲಿಸುವರಾರು ಅನ್ನೋದು ತಿಳಿತಾ ಇಲ್ಲ. ಪತ್ರಿಕೆಗಳ ಸುದ್ದಿಗಳು ಮೊಬೈಲ್ನೊಳಗೆ ಹರಿದಾಡುವ ವಿಷಯಗಳು ಕೇಳಿರುವ ವಿಚಾರಗಳೆಲ್ಲವೂ ಮನೆ ಒಳಗಿಂದ ಹೊರಗಡೆ ಹೆಜ್ಜೆ ಇಡುವುದಕ್ಕೆ ಇನ್ನೆರಡು ಸಲ ಯೋಚಿಸುವಂತೆ ಮಾಡಿದೆ. ಹೇಗೆ ಧೈರ್ಯ ತಂದುಕೊಳ್ಳಲಿ ದಾರಿ ಬದಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಬಳಿಗೆ ಯಾವನೋ ಒಬ್ಬ ಬಂದು ಚುಡಾಯಿಸಿದನಂತೆ. ಪಕ್ಕದ ಮನೆಯ ಹುಡುಗಿಯೊಬ್ಬಳು ತೆರಳಿದವಳು ವಾಪಸ್ ಬರಲೇ ಇಲ್ಲವಂತೆ, ಶಾಲೆಗೆ ಕಳುಹಿಸುವಾಗ ಟಾಟಾ ಎಂದೂ ಹೇಳಿದ ಮಗಳು ಡ್ರಗ್ಸ್ ಮಾದಕ ದ್ರವ್ಯಕ್ಕೆ ಬಲಿಯಾಗಿದ್ದಳಂತೆ. ಸುಮ್ಮನೆ ನಡೆದು ಹೋಗುತ್ತಿದ್ದವರ ಮೇಲೆ ಜೋರಾಗಿ ಬಂದು ಗಾಡಿಯೊಂದು ಅಪ್ಪಳಿಸಿ ಮರಣವಾಗಿದೆಯಂತೆ. ರಸ್ತೆ ದಾಟುವಾಗ ಎಷ್ಟು ಜಾಗರೂಕತವಾಗಿದ್ದರೂ ಸಾವು ಕಾಯುತ್ತಿದೆಯಂತೆ, ನೆಮ್ಮದಿಯಲ್ಲಿದ್ದವರಿಗೆ ಹೃದಯವು ನಿಂತು ಹೋಗಿದೆಯಂತೆ ಕಷ್ಟದಲ್ಲಿದ್ದಾರೆ ಅಂತ ಸಹಾಯ ಮಾಡಿದರೆ ಮೋಸವು ಜೋರಾಗಿ ನಕ್ಕು ತೆರಳಿದೆಯಂತೆ, ಹೀಗಿರುವಾಗ ನೆಮ್ಮದಿಯಲ್ಲಿ ಹೇಗೆ ಬದುಕೋದು. ಭಯವು ಮಾತ್ರ ಪ್ರತಿ ಊರುಗಳ ಬೀದಿಗಳನ್ನ ಮತ್ತೆ ಮತ್ತೆ ಸುತ್ತುತ್ತಿದೆ. ಭಯವು ದೂರಾಗಿ ನೆಮ್ಮದಿಯು ಊರ ತುಂಬೆಲ್ಲ ರಂಗೋಲಿ ಹಾಸಿ ಕರೆಯುವ ದಿನಗಳು ಯಾವತ್ತು ಬರುತ್ತದೆ... ತಿಳಿದವರು ತಿಳಿಸಿ ಕೊಡಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ