ಸ್ಟೇಟಸ್ ಕತೆಗಳು (ಭಾಗ ೮೯೫)- ಮೂಟೆ

ಆ ದಾರಿಯಲ್ಲಿ ಸಾಗುವವರ ಎಲ್ಲರ ಬಳಿಯೂ ದೊಡ್ಡ ದೊಡ್ಡ ಮೂಟೆಗಳಿವೆ. ಆ ಗೋಣಿಯ ಮೂಟೆಗಳನ್ನ ಹೊತ್ತು ಹೆಜ್ಜೆ ಇರಿಸಿದ್ದಾರೆ. ಹಲವು ದಿನಗಳಿಂದ ಗೋಣಿಯೊಳಗಿನ ಮೂಟೆಯೊಳಗಿನ ಭಾರ ಹೆಚ್ಚಾದರೂ ಸಹ ಮೂಟೆಯನ್ನು ಬಿಡಿಸಿ ತೆರೆದು ನೋಡುವ ಕೆಲಸವನ್ನು ಮಾಡಲಿಲ್ಲ. ಸಾಗುತ್ತಿದ್ದವರಿಗೆ ಕುತ್ತಿಗೆ ನೋವಾಗಿದೆ. ಸಾಗುವ ವೇಗ ಕಡಿಮೆಯಾಗಿದೆ. ಏನೆಂದರು ಸಹ ಮೂಟೆ ಇಳಿಸುತ್ತಿಲ್ಲ. ನಿರಾಕಾರ ಇವರ ಸ್ಥಿತಿ ನೆನೆದುಕೊಂಡು ತುಟಿಯಂಚಲ್ಲಿ ನಗು ಬಿರಿದ್ದಾನೆ. ಮೂಟೆಯನ್ನು ಬಿಡಿಸಿ ನೋಡಿದರೆ ಅಂತೆಗಳು, ಅಂದುಕೊಂಡ ರಾಶಿಗಳು, ಅನರ್ಥದ ಪ್ರಶ್ನೆಗಳು, ಇವರಿಗೆ ಸಂಬಂದವೇ ಇಲ್ಲದ ವಾಕ್ಯಗಳು, ಮತುಗಳು, ಅನಗತ್ಯ ಕಸ ಕಡ್ಡಿಗಳೇ ವಿಪರೀತವಾಗಿ ತುಂಬಿಕೊಂಡಿದೆ. ಎಲ್ಲವನ್ನ ತೆರೆದೋದಿ, ಉಪಯುಕ್ತವಾದುದನ್ನ ಮಾತ್ರ ಮೂಟೆ ಒಳಗೆ ಸೇರಿಸಿದರೆ ಇನ್ನೂ ಹಲವು ದೂರ ಸುಲಭವಾಗಿ ಸಾಗಿ ಬಿಡಬಹುದು. ವ್ಯರ್ಥವಾದದ್ದನಲ್ಲೆ ಚೆಲ್ಲಿ ಉಪಯುಕ್ತವಾದುದನ್ನ ಮಾತ್ರ ಹೆಗಲೇರಿಸಿ ನಡೆದರೆ ಸಾಕು. ಆದರೆ ಅವರೆಲ್ಲರಿಗೂ ಅವರು ಹೊತ್ತ ಮೂಟೆಯ ಒಳಗಿರುವುದೆಲ್ಲವೂ ಸತ್ಯವೇ ಹಾಗಾಗಿ ಯಾರ ಮಾತಿಗೂ ಕೇಳದೇ ನಡೆದಿದ್ದಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ