ಸ್ಟೇಟಸ್ ಕತೆಗಳು (ಭಾಗ ೮೯೭)- ಉಳಿದು ಬಿಟ್ಟಿದ್ದೇವಾ?

ಸ್ಟೇಟಸ್ ಕತೆಗಳು (ಭಾಗ ೮೯೭)- ಉಳಿದು ಬಿಟ್ಟಿದ್ದೇವಾ?

ಉಳಿದುಬಿಟ್ಟಿದ್ದೇವಾ ಅಲ್ಲಿಯೇ? ಹುಟ್ಟಿದ ಊರು ಅಲ್ಲೇ ಪರಿಚಯವಾದ ಒಂದಷ್ಟು ಮುಖಗಳು, ಅಲ್ಲಿಂದಲೇ ಸ್ವಲ್ಪ ದೂರಕ್ಕೆ ಸಾಗಿ ಓದಿದ ಶಾಲೆ, ಆಡಿದ ಆಟಗಳು, ಭಾಗವಹಿಸಿದ ಒಂದಷ್ಟು ಸ್ಪರ್ಧೆಗಳು. ದೊಡ್ಡ ಓದಿಗಾಗಿ ಊರು ಬಿಟ್ಟ ಮನಸ್ಸುಗಳು, ಅಲ್ಲಿ ಇನ್ನೊಂದಷ್ಟು ಹೊಸ ಗೆಳೆಯರು, ಹೊಸ ಊರು, ಹೊಸ ಮುಖಗಳು, ಹೊಸ ವಿಚಾರಗಳು ಕೆಲಸಕ್ಕಾಗಿ ಇನ್ನೊಂದು ಊರಿಗೆ ಅಲೆದಾಟ ಬೆಳಗಿನಿಂದ ಸಂಜೆಯವರೆಗೆ ದುಡಿತ, ದುಡಿತದಲ್ಲಿ ಹೊಸತನನ್ನು ಮಾಡುವಂತಹ ತುಡಿತ. ಆಗಾಗ ಮನೆಯವರ ಭೇಟಿ ,ಕಷ್ಟ ಸುಖ ವಿಚಾರಣೆ, ಮಾತೆತ್ತಿದರೆ ಸಮಯವಿಲ್ಲ ಎನ್ನುವಂಥ ದೊಡ್ಡ ಫಲಕಗಳನ್ನು ಎದೆಯ ಮೇಲೆ ಹೊತ್ತುಕೊಂಡು ಹಾಗೆ ಬದುಕಿಬಿಟ್ಟಿರುವ ನಾವು ಅಲ್ಲೇ ಉಳಿದು ಬಿಟ್ಟಿದ್ದೇವಾ? ಹೊಸತೊಂದು ಬದುಕನ್ನ ಆಲೋಚಿಸದೆ ಗಟ್ಟಿ ನಿರ್ಧಾರದಿಂದ ತೊಂದರೆಯಾದರೂ ಪರವಾಗಿಲ್ಲ ಅಂದುಕೊಂಡು ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳದೆ ಬಂದ ಬದುಕನ್ನ ಹಾಗೆ ಸಾಗಿಸಿ ಬಿಟ್ಟೆವಾ? ಮಕ್ಕಳಿಗೋಸ್ಕರ ಸರ್ವಸ್ವವನ್ನು ತ್ಯಾಗ ಮಾಡಿ ದೂರದಲ್ಲಿರುವ ಮಕ್ಕಳನ್ನು ಯೋಚಿಸುತ್ತ ಆಗಾಗ ಕಣ್ಣೀರುಳಿಸುತ್ತಾ ಯಾವುದನ್ನೂ ಅನುಭವಿಸದೆ ಕಾಲನ ಕರೆಗೆ ಓಗುಡುತ್ತಾ ಕುಳಿತ ಹಿರಿಯರು ಅಲ್ಲೇ ಉಳಿದುಬಿಟ್ಟಿದ್ದಾರಾ?  ಹಾರುವ ಮನಸ್ಸಿದ್ದರೂ ರೆಕ್ಕೆ ಗಟ್ಟಿಯಾಗಿದ್ದರೂ ನೆಲ ಬೇಸರಿಸಿಕೊಳ್ಳುತ್ತದೆ ಸುತ್ತ ನಿಂತವರು ತಪ್ಪು ತಿಳಿದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ರೆಕ್ಕೆಯ ಮಡಚಿ ಅದುಮಿಟ್ಟುಕೊಂಡು ಕುಳಿತಿದ್ದೆವಲ್ಲ ನಾವು ಇಲ್ಲೇ ಉಳಿದುಬಿಟ್ಟಿದ್ದೇವಾ... ಆಗಾಗಾ ಹಾರಿ ಬರುವ ಕಪ್ಪು ಮೋಡಗಳ ಹಾಗೆ ಪ್ರಶ್ನೆಗಳು ತುಂಬಿಕೊಂಡಿವೆ... ಬದಲಾವಣೆಯ ಗಾಳಿ ಬೀಸಬೇಕು , ಅಥವಾ ವಿಚಾರಗಳ ಬೆಳಕು ಬೀಳಬೇಕು ಕರಗಿ ನೀರಾಗಲು... ಅವನ ಬರವಣಿಗೆ ಸಾಗುತ್ತಿದೆ ಪೂರ್ಣವಿರಾಮವಿಲ್ಲದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ