ಸ್ಟೇಟಸ್ ಕತೆಗಳು (ಭಾಗ ೮೯೯)- ಈ ದಿನ

ಸ್ಟೇಟಸ್ ಕತೆಗಳು (ಭಾಗ ೮೯೯)- ಈ ದಿನ

ಪ್ರತಿದಿನ ಊರು ಸುತ್ತಾಡೋನಿಗೆ ಇವತ್ತು ಕೈಲಾಸದ ಕಡೆಯಿಂದ ಕರೆ ಬಂದಿತ್ತು. ಒಂದು ಕಾರ್ಯಕ್ರಮದ  ನಿರೂಪಣೆ ಮಾಡಿ ಅದರ ಬಗ್ಗೆ ಒಂದಷ್ಟು ಜನರಿಗೆ ತಿಳಿಸುವುದಕ್ಕೆ ಶಿವಗಣದಿಂದ ಅನುಮತಿಯೂ ಸಿಕ್ಕಿತ್ತು. ಹಾಗಾಗಿ ಹೊರಟಿದ್ದೆ. ಈ ದಿನ ಸ್ವಲ್ಪ ವಿಶೇಷ. ಪ್ರತಿ ವರ್ಷವೂ ಶಿವರಾತ್ರಿ ದಿನ ಶಿವನಿಗೆ ಮಾತ್ರ ವಿಶೇಷವಾದ ಅಲಂಕಾರ ಆತನಿಗೆ ಸ್ವಲ್ಪ ವಿಶೇಷ ದಿನ ಕೂಡ ಆಗಿರುತ್ತೆ. ಪಾರ್ವತಿ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದರೂ ಕೂಡ ತನಗೆ ಆ ದಿನ ಏನು ವಿಶೇಷ ಇಲ್ವಲ್ಲ ಅಂತ ಒಂದೊಂದು ಸಲ ಬೇಜಾರು ಮಾಡ್ಕೋತಾರೆ. ಆದರೆ ಈ ದಿನ ಮಹಿಳಾ ದಿನ ಇರೋ ಕಾರಣ ಪಾರ್ವತಿಗೂ ಖುಷಿಯೋ ಖುಷಿ. ಶಿವನಿಗಿಂತ ವಿಶೇಷವಾಗಿ ಪಾರ್ವತಿ ದೇವಿ ತಯಾರಾಗಿ ಚಂದದ ಕಾರ್ಯಕ್ರಮ ಆಯೋಜಿಸಿದ್ದರು. ನಂದಿಯ ಕುಣಿತ, ಗಣಪತಿಯ ಹಾಡು, ಷಣ್ಮುಖನ ಅಭಿನಯ, ಇಲಿಗಳ ಹಾಸ್ಯ ರಸ ಸಂಜೆ, ಶಿವಗಣಗಳಿಂದ ನೃತ್ಯ, ಶಿವನ ತಾಂಡವ ನಾಟ್ಯ, ಪಾರ್ವತಿಯ ಬದುಕಿನ ಸಾರದ ಉಪನ್ಯಾಸ. ಎಲ್ಲರಿಗೂ ವಿಶೇಷವಾದ ಉಡುಗೊರೆಗಳು ಕೂಡಾ ಸಿಕ್ಕಿತು. ಆ ಕಾರ್ಯಕ್ರಮವನ್ನು ತುಂಬಾ ಚೆಂದಗಾಣಿಸಿಕೊಟ್ಟು ಎಲ್ಲರ ಆಶೀರ್ವಾದವನ್ನು ಪಡೆದುಕೊಂಡು ಅಲ್ಲಿಂದ ಹೊರಟುಬಿಟ್ಟಿದ್ದೆ. ಹೀಗೂ ಕಾರ್ಯಕ್ರಮ ಮಾಡಬಹುದು, ಅನ್ನೋದು ಅದನ್ನು ನೋಡಿಯೇ ತಿಳಿದದ್ದು. ಶಿವ ಈ ದಿನವನ್ನ ಪೂರ್ತಿಯಾಗಿ ಪಾರ್ವತಿಗೆ ಅರ್ಪಿಸಿ ಮಾತನಾಡಿದ, ಅವಳಿಂದಲೇ ಇಹವು ಪರವು ಆಕೆ ನಕ್ಕರೆ ಇದು ಕೈಲಾಸ, ಆಕೆ ಬದುಕಿದರೆ ಇದು ಸ್ವರ್ಗ, ಆಕೆಯ ಕನಸುಗಳೇ ನಾವು... ಆಕೆಗೆ ನಮಿಸಿ ಮೌನವಾದ. ದೊಡ್ಡ ಮಾತುಗಳನ್ನ ಕೇಳಿ ಮೌನದಿಂದ ಧರೆಗಿಳಿದು ಬಿಟ್ಟೆ. ನಿಮಗೆ ಸುದ್ದಿ ತಿಳಿಸುವುದ್ದಕ್ಕೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ