ಸ್ಟೇಟಸ್ ಕತೆಗಳು (ಭಾಗ ೮೯) - ಉಳಿಸುವಿರಾ?
ಸಭೆ ಸೇರಬೇಕೆಂಬ ತೀರ್ಮಾನ ವಾಟ್ಸಪ್ ನಲ್ಲಿ ಬಂತು. ನಮ್ಮೂರ ಶಾಲೆಯ ಏಳನೇ ತರಗತಿಯ ಕೊಠಡಿಯಲ್ಲಿ. ಹಲವಾರು ನಿರ್ಧಾರಗಳು ಬಾಕಿ ಇದರಿಂದ ಪುಸ್ತಕದಲ್ಲಿ ಪಟ್ಟಿ ಮಾಡಿಕೊಂಡು ಎಲ್ಲರೂ ಬಂದಿದ್ದರು. ಈ ಸಲ ನಮ್ಮೂರಿನ ಒಳಿತಿಗೆ ನಿರ್ಣಯ ಕೈಗೊಳ್ಳಬೇಕೆಂಬ ಯೋಚನೆ ಎಲ್ಲರಲ್ಲಿಯೂ ಇತ್ತು. ಕೊಠಡಿಯು ಗೆದ್ದಲು ತಿಂದುಬಿಡುವ ಸ್ಥಿತಿಯಲ್ಲಿರುವ ಮರದಂತೆ ಇತ್ತು. ಮಕ್ಕಳ ಅಂಡು ಕೂರದೇ ಬೆಂಚು ಡೆಸ್ಕುಗಳ ಮೇಲೆ ಧೂಳು ರಾರಾಜಿಸುತ್ತಿದೆ. ಜೇಡನ ಅರಮನೆ ನಿರ್ಮಾಣದ ಕೆಲಸ ಸಾಗುತ್ತಲೇ ಇದೆ. ಕಸಗಳೆಲ್ಲ ಕಿಟಕಿಯೊಳಗಿಂದ ಹಾರಿಬಂದು ಇಲ್ಲೇ ಮಲಗಿದೆ. ಯಾವುದೋ ಹಳೆಯ ಪತ್ರಿಕೆಯೊಂದರಿಂದ ಬೆಂಚನ್ನು ಒರೆಸಿ ಆಸೀನರಾದರೆಲ್ಲರೂ.
"ಅದೇನ್ರೀ ಡೆಲ್ಲೀಲಿ ಕೃಷಿಕರ ಹೋರಾಟರ ಸುದ್ಧಿ".
" ಬೆಂಗಳೂರು ಬಂದಾಯಿತಲ್ಲ ಏನು ಸುಧಾರಣೆ ಆಯ್ತು "
"ಸ್ವಾಮಿ ಅಲ್ಲೆಲ್ಲೋ ಮಗುನ ಕಿಡ್ನಾಪ್ ಮಾಡಿದ್ದಾರಂತೆ, ಏನ್ ಜನಾರೀ"
" ಮೇಡಂ ನಿಮ್ಮ ಸರ ತುಂಬಾ ಚೆನ್ನಾಗಿದೆ ಎಲ್ಲಿ ತಗೊಂಡ್ರಿ"
"ಹೇ ಈ ಫಿಗರ್ ನೋಡೋ"
"ಅಕ್ಕಾ ನಿಮ್ಮ ಪಕ್ಕದ ಮನೆ ಹುಡುಗಿ ಓಡಿ ಹೋದ್ಲಂತೆ, ಏನು ವಿಷಯ"
"ನಮ್ಮನೆ ನಾಯಿ ನೋಡಿದ್ರಾ ಹೇಗಿದೆ ಗೊತ್ತಾ "
"ಯಾವಾಗಲೋ ನಿನ್ನ ಮದುವೆ, ಇನ್ನೆಷ್ಟು ದಿನ"
"ಸಾರ್ ಮೇಡಂ ಟೀ ಬಂತು ಬನ್ನಿ"
ಟೀ ಜೊತೆ ಬಿಸ್ಕತ್ತಿನ ಸರಬರಾಜು ಆಯಿತು. "ಈಗ ಸಮಯ ಆಯಿತು, ಮುಂದಿನ ಸಭೆಯಲ್ಲಿ ನಿರ್ಣಯ ತಗೊಳ್ಳುವ"
ಅಲ್ಲೇ ಹಾರುತ್ತಿದ್ದ ದೂಳು ಸಿಟ್ಟಿನಿಂದ ಮತ್ತದೇ ಜಾಗದಲ್ಲಿ ಬಂದು ಆಸೀನವಾಯಿತು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ