ಸ್ಟೇಟಸ್ ಕತೆಗಳು (ಭಾಗ ೯೦೧)- ಅಹಂಕಾರ

ಸ್ಟೇಟಸ್ ಕತೆಗಳು (ಭಾಗ ೯೦೧)- ಅಹಂಕಾರ

ಆಕಾಶಕ್ಕೆ ಸ್ವಲ್ಪ ಅಹಂಕಾರ ಬಂದಿತ್ತು. ಬೆಳಗ್ಗೆ ಒಂದು ಬಣ್ಣ, ಸಂಜೆಗೊಂದು ಬಣ್ಣ, ಮಧ್ಯಾಹ್ನಕ್ಕೆ ಇನ್ನೊಂದು ಬಣ್ಣವನ್ನ ನೀಡುತ್ತಲೇ ಇದ್ದೇನೆ, ಮೋಡಗಳನ್ನ ಹಾಗೆ ತೇಲಿಸುವುದಕ್ಕೆ ಬಿಟ್ಟು ಜನರಿಗೆ ಮಳೆ ಸುರಿಸುವುದಕ್ಕೆ ಸಹಾಯ ಮಾಡಿದ್ದೇನೆ, ನೆಮ್ಮದಿಗಾಗಿ ಕಣ್ಣಿತ್ತಿ ನೋಡಿದರೆ ನಕ್ಷತ್ರಗಳನ್ನ ಮಿನುಗಿಸಿ ಅವುಗಳಿಗೆ ಬೆನ್ನೆಲುಬಾಗಿ ನಿಂತಿರುತ್ತೇನೆ. ಇಷ್ಟೆಲ್ಲ ಅವಕಾಶ ನೀಡಿದ ನನಗೆ ಒಂದಷ್ಟು ಹೆಚ್ಚು ಮೌಲ್ಯ ಸಿಗಬೇಕು ಎಲ್ಲರಿಂದಲೂ ಹೆಚ್ಚಿನ ಗೌರವವನ್ನು ಪಡೆದುಕೊಳ್ಳಬೇಕು. ಎಲ್ಲಾ ಆಸೆಗಳನ್ನು ಹೊಂದಿ ತನ್ನಿಂದಲೇ ಎಲ್ಲಾ ಜನರು ಸಂಭ್ರಮ ಪಡುತ್ತಿದ್ದಾರೆ ಅನ್ನುವ ಆಲೋಚನೆಯನ್ನು ಧರಿಸಿಕೊಂಡಿತು. ಆ ದಿನ ಬೆಳಗ್ಗೆ ತನ್ನ ಕೆಳಗೆ ಹಾರುತ್ತಿದ್ದ ಗಿಡುಗನನ್ನ ನಿಲ್ಲಿಸಿ ನೀನಿನ್ನು ಮುಂದೆ ಇಲ್ಲಿ ಹಾರುವಾಗ ನನ್ನ ಬಳಿ ಅನುಮತಿ ಕೇಳಬೇಕು ಎನ್ನುವ ಮಾತಿನ ಜೊತೆಗೆ ತನ್ನ ಎಲ್ಲಾ ಆಲೋಚನೆಗಳನ್ನ ಅದರ ಮುಂದೆ ತೆರೆದಿಟ್ಟಿತು. ಆಗ ಗಿಡುಗ ನೀನೇ ಅದ್ಭುತ ನೀನೇ ಅಪ್ರತಿಮ ಎಲ್ಲಾ ಅಂದುಕೊಳ್ಳೋಣ, ಆದರೆ ನಿನಗೆ ಮೌಲ್ಯ ಸಿಕ್ಕಿರೋದು ನಿನ್ನ ಸುತ್ತಮುತ್ತ ಇರುವ ಹಲವರಿಂದ, ಸೂರ್ಯ ಬೆಳಗೋದ್ರಿಂದ ,ಗಾಳಿ ಚಲಿಸುವುದರಿಂದ, ಮೋಡ ನೀರು ಹೊತ್ತುಕೊಳ್ಳುವುದರಿಂದ, ನಕ್ಷತ್ರ ಮಿನುಗುವುದರಿಂದ ನಿನಗೆ ಮೌಲ್ಯ ಸಿಕ್ಕಿದೆ. ಹಾಗಾಗಿ ಒಂದಷ್ಟು ಯೋಚನೆ ಮಾಡಿ ವರ್ತಿಸಿದರೆ ನೀನು ಏರಿರುವ ಎತ್ತರಕ್ಕೆ ಮೌಲ್ಯ ಸಿಗುತ್ತೆ. ಅಂತಂದು ಹಾರಿಹೋಯ್ತು ಆಕಾಶಕ್ಕೆ ತನ್ನ ತಪ್ಪಿನ ಅರಿವಾಯಿತು. ನಾನವರಿಗೆ ಅವರು ನನಗೆ, ಒಬ್ಬರಿಗೊಬ್ಬರು ಪೂರಕವಾದರೆ ಮಾತ್ರ ಬದುಕು ಸುಂದರ. ಅಹಂಕಾರ ತ್ಯಜಿಸಿ ನಿಷ್ಕಲ್ಮಶನಾಗಿ ಬದುಕುವುದಕ್ಕೆ ಆರಂಭ ಮಾಡಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ