ಸ್ಟೇಟಸ್ ಕತೆಗಳು (ಭಾಗ ೯೦೪)- ಆಟ

ಸ್ಟೇಟಸ್ ಕತೆಗಳು (ಭಾಗ ೯೦೪)- ಆಟ

ಆ ಮರದ ಕೆಳಗೆ ಹೊಸತೊಂದು ಆಟ ಶುರುವಾಗಿದೆ. ನೋಡುವುದಕ್ಕೆ ಸುತ್ತ ಸಾವಿರ ಜನ ನಿಂತಿದ್ದಾರೆ. ಅಲ್ಲಿ ಆಟವನ್ನು ನಡೆಸ್ತಾ ಇರುವವರು ಯಾರು ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ. ಪ್ರತಿ ಆಟಕ್ಕೂ ಒಬ್ಬ ನಾಯಕನಾಗಿ ಮುಂದೆ ಬಂದು ತಮ್ಮ ಚಾಲಾಕಿತನವನ್ನು ಪ್ರದರ್ಶಿಸುತ್ತಿದ್ದಾರೆ. ಯಾರು ಚೆನ್ನಾಗಿ ಆಡಬಹುದು ಅನ್ನೋದನ್ನ ಅಲ್ಲಿ ನಿಂತ ಹಲವರು ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ. ಹಿಂದಿನ ಆಟದಲ್ಲಿ ಅವನು ಚೆನ್ನಾಗಿ ಆಡಿದ ಅನ್ನುವ ಕಾರಣಕ್ಕೆ ಅವನೇ ಮುಂದುವರೆಯಲಿ ಅಂತ ಅಂದ್ರೆ ಕೆಲವರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಏನು ಆಟ ಆಡದೆ ಪ್ರತಿಸಲ ಸೋಲ್ತಾ ಇದ್ರು ಕೂಡ ಅಂಥವರಿಗೆ ಮತ್ತೆ ಮತ್ತೆ ಆಡುವುದಕ್ಕೆ ಅವಕಾಶ ಕೊಡುವಂತಹ ಒಂದಷ್ಟು ನಾಯಕರು ಹುಟ್ಟಿಕೊಂಡಿದ್ದಾರೆ. ಈ ಎಲ್ಲದರ ನಡುವೆ ನಿಜವಾದ ಆಟವನ್ನು ಮರೆತು ಬದುಕಿ ನಿಂತವರು ಹಲವರು. ಆಟವೇ ಬೇಡವೆಂದು ಮತ್ತೆ ಮನೆಗೆ ತೆರಳಿದವರು ಇನ್ನೂ ಕೆಲವರು. ಒಟ್ಟಿನಲ್ಲಿ ಯಾರೋ ಒಬ್ಬ ಮೇಲೆ ನಿಂತು ಆಟ ಆಡಿಸುತ್ತಿದ್ದಾನೆ. ಇಲ್ಲಿ ಸುತ್ತ ಸೇರಿದ ಜನ ತಾವೊಂದುಕೊಂಡ ಹಾಗೆ ಆಗುತ್ತದೆ, ತಾವು ಹೇಳಿದವರಿಗೆ ಆಟವಾಡುವುದಕ್ಕೆ ಅವಕಾಶ ನೀಡ್ತಾರೆ ಅಂತ ಅಂದುಕೊಂಡದ್ದೇ ಬಂತು. ಈ ಆಟದಲ್ಲಿ ದುಡ್ಡು ಮಾತನಾಡುತ್ತೆ ,ಅಧಿಕಾರ ಮಾತನಾಡುತ್ತೆ ,ಅಂತಸ್ತು ಮಾತನಾಡುತ್ತೆ ,ಜಾತಿ ಮಾತನಾಡುತ್ತೆ ,ಪರಿಚಯ ಮಾತನಾಡುತ್ತೆ ,ಕುಟುಂಬ ಮಾತನಾಡದೆ ಕೆಲಸ ಮಾತನಾಡುವುದು ಕಡಿಮೆ.ಆಟದ ಕೌಶಲ್ಯ ಮಾತನಾಡುವುದು ಕಡಿಮೆ. ಒಟ್ಟಿನಲ್ಲಿ ಅವರ ಸುತ್ತಮುತ್ತಲಿನವರು ಆಟವಾಡುತ್ತಿರಬೇಕು .ಅವರನ್ನ ಜನ ನೋಡುತ್ತಿರಬೇಕು. ಸುಮ್ಮನೆ ಆಟದೊಳಗೆ ಹೋಗಿ ನಿರಾಶೆಯಿಂದ ಹಿಂತಿರುಗುವುದಕ್ಕಿಂತ ಆಟವನ್ನು ದೂರದಿಂದಲೇ ನೋಡಿ ಸಾಗಿ ಬಿಡುವುದು ಒಳಿತು. ಹಾಗಾಗಿ ನಾನಂತೂ ವಾಪಸು ಬಂದುಬಿಟ್ಟೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ