ಸ್ಟೇಟಸ್ ಕತೆಗಳು (ಭಾಗ ೯೦೭)- ಬದುಕಿನ ಕಲಿಕೆ
ಸನ್ನಿವೇಶಗಳು ಬದುಕು ಕಲಿಸ್ತಾವೆ ಅಂತ ಪ್ರತಿಸಲ ಮನೆಯಲ್ಲಿ ಅಪ್ಪ ಹೇಳ್ತಾನೇ ಇದ್ರು ಕೂಡ ಮಕ್ಕಳಿಗೆ ಅರ್ಥವೇ ಆಗಿರಲಿಲ್ಲ. ಅವರ ಪ್ರಕಾರ ಪ್ರತಿಯೊಂದು ನಾವು ಕಲಿತೇ ಆಗಬೇಕೇ ವಿನಃ ಸನ್ನಿವೇಶದ ರೂಪದಲ್ಲಿ ಕಲಿಯುವುದಲ್ಲ ಅನ್ನೋದಾಗಿತ್ತು. ಅದನ್ನ ಅಪ್ಪ ಎಷ್ಟೇ ವಿವರಿಸುವುದಕ್ಕೆ ಪ್ರಯತ್ನಪಟ್ಟರೂ ಅವರಿಗೆ ಅದು ಅರ್ಥನೇ ಆಗಿರಲಿಲ್ಲ. ಶಾಲೆಯಿಂದ ಪ್ರವಾಸ ನಿಗದಿಯಾಗಿತ್ತು. ಎಲ್ಲರೂ ಸಂಭ್ರಮದಿಂದ ಹೊರಟಿದ್ದರು. ಎಲ್ಲಿಗೆ ತಲುಪುತ್ತೇವೆ ಅನ್ನೋದು ಅವರು ಯಾರಿಗೂ ಗೊತ್ತಿಲ್ಲದೇ ಇದ್ದರೂ ನಂಬಿಕೆ ಮಾತ್ರ ಅವರ ಜೊತೆಗಿತ್ತು. ಹಾಗಾಗಿ ಹೊರಟವರಿಗೆ ಅಲ್ಲೊಂದು ಕಡೆ ನದಿಯಲ್ಲಿ ತಾವೇ ದೋಣಿ ನಡೆಸುವ ಆಟವನ್ನು ಆಡಿಸಲಾಗಿತ್ತು. ಅಲ್ಲಿ ಗೊತ್ತಿಲ್ಲ ಅಂದುಕೊಂಡರೆ ಎಲ್ಲರ ಆಟವನ್ನು ದಡದಲ್ಲಿ ನಿಂತು ಕಣ್ತುಂಬಿಕೊಳ್ಳಬೇಕು. ಅದಕ್ಕಾಗಿ ಕಲಿಯುತ್ತೇವೆ ಅಂತ ಮನಸ್ಸಿಟ್ಟು ಇಳಿದುಬಿಟ್ರು. ಒಂದೆರಡು ಸಲ ಹೆಜ್ಜೆ ತಪ್ಪಿದರೂ ಕೂಡ ಮುಂದೆ ಗಟ್ಟಿಯಾಗಿ ದೋಣಿ ನಡೆಸುವುದನ್ನು ಕಲಿತೇ ಬಿಟ್ರು. ಅದೇನು ದಿನಗಟ್ಟಲೆ ಪ್ರಯತ್ನವಲ್ಲ, ಆ ಸನ್ನಿವೇಶದಲ್ಲಿ ಅವರು ಎದುರಿಸಿದ ಸನ್ನಿವೇಶಗಳಿಂದಲೇ ಅವರ ಕಲಿಕೆ ಗಟ್ಟಿಯಾಗಿತ್ತು. ಇನ್ನವರಿಗೆ ದೋಣಿ ಕಲಿಕೆ ಅಷ್ಟೇನೂ ದೊಡ್ಡದಲ್ಲ. ಆ ದಿನ ಸಂಜೆ ಮನೆಗೆ ತಲುಪಿದಾಗ ಅಪ್ಪನ ಮಾತು ಅರ್ಥವಾಗಿತ್ತು. ಸನ್ನಿವೇಶಗಳು, ಪರಿಸ್ಥಿತಿಗಳು ಬದುಕು ಕಲಿಸುತ್ತವೆ ಅಂತಾ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ