ಸ್ಟೇಟಸ್ ಕತೆಗಳು (ಭಾಗ ೯೦೮)- ಸುಳ್ಳು

ಸ್ಟೇಟಸ್ ಕತೆಗಳು (ಭಾಗ ೯೦೮)- ಸುಳ್ಳು

ಅವನು ಮಾತನಾಡೋದು ಕಡಿಮೆ. ಆಗಾಗ ಏನಾದರೂ ಒಂದು ಮಾತನ್ನ ಉದುರುಸ್ತಾ ಇರ್ತಾನೆ. ಅದರಲ್ಲಿ ಅರ್ಥಾನೂ ಇರುತ್ತೆ. ಕೆಲವೊಂದು ಸಲ ಅರ್ಥ ಆಗೋದು ತಡವಾಗುತ್ತೆ .ಹೀಗಿದ್ದವ ಮೊನ್ನೆ ಒಂದು ದೊಡ್ಡ ಮಾತನಾಡಿದ್ದ." ಸುಳ್ಳು ಮಾತನಾಡುತ್ತೆ ಸುಳ್ಳಿನ ಒಳಗೊಂದು ಅರ್ಥ ಇರುತ್ತೆ ನಾವು ಆ ಸುಳ್ಳನ್ನ ಅರ್ಥಮಾಡಿಕೊಳ್ಳೋದಿಲ್ಲ ನೇರವಾಗಿ ಅವರು ಹೇಳುವ ಸುಳ್ಳನ್ನೇ ತಿಳಿದುಕೊಂಡು ಬಿಡುತ್ತೇವೆ. ವಿನಃ ಅದರೊಳಗೆ ಅವಿತಿರುವ ಹಲವು ವಿಚಾರಗಳನ್ನ ತಿಳಿದುಕೊಳ್ಳುವುದರ ಕಡೆಗೆ ಗಮನವೇ ಕೊಡುವುದಿಲ್ಲ. ಈ ಸುಳ್ಳು ಅನ್ನುವುದು ಇದೆಯಲ್ಲ ಅದು ಯಾವುದೋ ಒಂದರ ಮುನ್ಸೂಚನೆ. ಒಂದಾದರೆ ಮೋಸ ಮಾಡೋದು, ಅಥವಾ ಎದುರಿನವರ ಮೇಲೆ ನಂಬಿಕೆ ಇಲ್ಲದೆ ಇರುವುದು, ಯಾವುದೋ ಒಂದು ಕೆಟ್ಟ ಕೆಲಸಕ್ಕೆ ಮುನ್ನುಡಿ ಇಡುವುದು, ನಂಬಿಕೆ ಕಡಿಮೆ, ದ್ವೇಷದ ಆರಂಭ, ಅಸೂಯೆಯ ಮೊದಲ ಹೆಜ್ಜೆ ,ಧೈರ್ಯ ಕಡಿಮೆಯಾಗಿರುವುದರ ಸಣ್ಣ ಗುರುತು, ಬದುಕುವ ದಾರಿ, ಹೀಗೆ ಬೇರೆ ಬೇರೆ ವಿಧಾನಗಳು ಒಳಗೆ ಅಡಗಿರುತ್ತವೆ. ನಾವು ಆ ಕ್ಷಣದ ಪ್ರತಿಕ್ರಿಯೆಗಿಂತ ಒಂದು ಸಲ ಯೋಚಿಸಿ ಸುಳ್ಳಿನ ಹಿಂದಿನ ಮುಖವನ್ನು ಗಮನಿಸಿದರೆ ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಬಹುದು. ಅದರಿಂದ ಸುಳ್ಳು ನಿಲ್ಲಬಹುದು ಅಥವಾ ಅವರೊಂದಿಗಿನ ಸಂಬಂಧವಾದರೂ ನಿಲ್ಲಬಹುದು. ಸುಳ್ಳನ್ನು ಕೇಳಿಸಿ, ಅದರ ಇನ್ನೊಂದು ಮುಖವನ್ನು ಅರ್ಥೈಸಿಕೊಳ್ಳುವ ಅಗತ್ಯತೆ ಸದ್ಯಕ್ಕಿದೆ". ಹೊರಟು ಬಿಟ್ಟ.ಅವನ ಮಾತು, ಒಂದರ್ಥದಲ್ಲಿ ನಿಜ ಅನಿಸ್ತು ಹಾಗಾಗಿ ಇನ್ನು ಮುಂದೆ ಹೇಳುವ ವಿಚಾರಗಳು  ಸತ್ಯವೋ ಸುಳ್ಳು ಎಂದು ಯೋಚಿಸುವುದರ ಜೊತೆಗೆ ಅದರ ಎರಡು ಮುಖಗಳನ್ನು ತಿಳಿದುಕೊಳ್ಳುವುದೇ ಒಳ್ಳೆಯದು ಅಂತನಿಸಿ ಆ ಕಾರ್ಯಕ್ಕೆ ಇಳಿದುಬಿಟ್ಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ