ಸ್ಟೇಟಸ್ ಕತೆಗಳು (ಭಾಗ ೯೦೯)- ಸ್ವಚ್ಛ

ಸ್ಟೇಟಸ್ ಕತೆಗಳು (ಭಾಗ ೯೦೯)- ಸ್ವಚ್ಛ

ಸ್ವಲ್ಪವಾದರೂ ಶುದ್ಧವಾಗೋ, ಮನಸ್ಸಿನೊಳಗಿನ ಒಂದಷ್ಟು ಕೆಟ್ಟ ಆಲೋಚನೆಗಳನ್ನು ತೊಳೆದುಕೋ, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ, ಜ್ಞಾನಯುತವಾದದ್ದನ್ನ ಅಳವಡಿಸಿಕೋ, ಒಳ್ಳೆಯ ವಿಚಾರವನ್ನು ಮಾತನಾಡು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ. ಆಗಾಗ ಮನಸ್ಸನ್ನು ಶುದ್ಧ ಮಾಡಿಕೋ ಜನ ಹೆಚ್ಚು ನಿನ್ನ ಹತ್ತಿರ ಬರುತ್ತಾರೆ ನಿನ್ನನ್ನ ಗಮನಿಸ್ತಾರೆ ಗೌರವಿಸ್ತಾರೆ, ಪ್ರತಿದಿನ ಮನೆಯಲ್ಲಿ ಅಜ್ಜನ ಈ ಮಾತನ್ನು ಕೇಳಿ ರೋಸಿ ಹೋಗಿತ್ತು. ನಾನ್ಯಾಕೆ ಶುದ್ಧ ಆಗಬೇಕು, ನಾನು ಸರಿಯಾಗಿ ಇದ್ದೇನೆ. ನನ್ನ ಮನಸ್ಸು ಶುದ್ದವಾಗಿದೆ ಅಥವಾ ಬಂದವರು ನನ್ನ ಮನಸ್ಸನ್ನು ನೋಡಿ ನನ್ನ ಹತ್ತಿರ ಬರುವುದಲ್ಲ, ನಾನು ಹೇಗಿದ್ದೇನೆ ಅನ್ನೋ ಕಾರಣಕ್ಕೆ ನನ್ನ ಹತ್ತಿರ ಬರೋದು. ಹೀಗೆ ಇಬ್ಬರ ನಡುವೆಯೂ ವಾದ ಮುಂದುವರೆದಿತ್ತು. ಪ್ರತಿ ದಿನ ಕೆಲಸದ ಜಂಜಾಟದಲ್ಲಿ ನನ್ನ ಪ್ರೀತಿಯ ಬೈಕನ್ನ ತೊಳೆಯೋದನ್ನೇ ಮರೆತಿದ್ದೆ. ವಾರಗಳು ನಾಲ್ಕು ಕಳೆದರೂ ಬೈಕಿಗೆ ಹನಿ ನೀರನ್ನು ಸೋಕಿಸಿರಲಿಲ್ಲ. ನನಗೆ ಪ್ರತಿದಿನ ಆ ಬೈಕನ್ನು ಚಲಾಯಿಸುವಾಗ ಒಂಥರಾ ಬೇಜಾರು ಅನ್ನಿಸ್ತಾ ಇತ್ತು, ಇದನ್ನ ಸ್ವಚ್ಛಗೊಳಿಸಬೇಕಿತ್ತಲ್ಲ ಅಂತ ಯೋಚನೆ ಬರ್ತಾ ಇತ್ತು ಸಮಯ ಹೊಂದಾಣಿಕೆ ಮಾಡಿಕೊಳ್ಳಲೇ ಇಲ್ಲ. ಆ ದಿನ ಸ್ವಚ್ಛಗೊಳಿಸಿಯೇ ಬಿಟ್ಟೆ. ತುಂಬಾ ಜನ ನನ್ನ ಬೈಕನ್ನ ಕಣ್ಣೆತ್ತಿ ನೋಡಿದ್ರು ಕೂಡ, ಒಂದೆರಡು ಜನ ಹೀಗಿರಬೇಕು ಬೈಕ್ ಅಂದವರು ಇದ್ದಾರೆ, ಅದನ್ನು ಹತ್ತಿರದಿಂದ ನಿಂತು ಗಮನಿಸಿದವರಿದ್ದಾರೆ, ಅಜ್ಜನ ಮಾತು ಇವತ್ತು ಅರ್ಥ ಆಯಿತು. ಮನಸ್ಸು ಶುದ್ಧವಾಗಬೇಕು. ಆಗ ಹತ್ರ ಬರೋರು ನಿಂತು ಗಮನಿಸುವರು ಹೆಚ್ಚಾಗುತ್ತಾರೆ ಗೌರವ ಹೆಚ್ಚಾಗುತ್ತೆ ಹೊರಗೆ ಮಾತ್ರ ಅಲ್ಲ ಒಳಗೂ ಶುದ್ಧನಾಗಬೇಕಾಗಿದೆ ನಾನು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ