ಸ್ಟೇಟಸ್ ಕತೆಗಳು (ಭಾಗ ೯೧೦)- ಅನಿಸಿಕೆ

ಸ್ಟೇಟಸ್ ಕತೆಗಳು (ಭಾಗ ೯೧೦)- ಅನಿಸಿಕೆ

ಆ ಮಗುವಿಗೆ ಏನೊಂದೂ ತಿಳಿತಾ ಇಲ್ಲ. ಪ್ರತಿದಿನ ಅಮ್ಮ ನನ್ನನ್ನ ಇಲ್ಲಿಗೆ ಕರೆದುಕೊಂಡು ಬರುತ್ತಾರೆ, ಒಂದು ಸಣ್ಣ ಬುಟ್ಟಿಯೊಳಗೆ ನನ್ನ ಕೂರಿಸಿ ಅವರೇನೋ ಕೆಲಸ ಮಾಡ್ತಾ ಇರುತ್ತಾರೆ. ಬಂದವರೆಲ್ಲ ಅಮ್ಮನ ಮುಂದೆ ಇಟ್ಟಿರುವ ಬೇರೆ ಬೇರೆ ತರಹದ ವಸ್ತುಗಳನ್ನ ತೆಗೆದುಕೊಂಡು ಹೋಗುತ್ತಾರೆ. ಅದರಿಂದ ಯಾವುದನ್ನಾದರೂ ಕೊಯ್ಯಬಹುದು, ಕತ್ತರಿಸಬಹುದು. ಅಂತಹ ವಸ್ತುಗಳನ್ನ ಮಾರುವುದು ಅಮ್ಮನ ಕೆಲಸ. ನಮ್ಮದು ಇದೇ ಊರು ಅಂತಲ್ಲ, ಹಲವು ಊರು ಸುತ್ತಿದ್ದೇವೆ. ಯಾರಾದರೂ ಆ ಚೂಪಾಗಿರುವುದನ್ನ ಹರಿತವಾಗಿರುವುದನ್ನು ತೆಗೆದುಕೊಂಡು ಹೋದರೆ ಅವತ್ತು ಮನೆಯಲ್ಲಿ ಏನಾದರೂ ವಿಶೇಷ ಇರುತ್ತೆ. ಇಲ್ಲವಾದರೆ ಅಪ್ಪನ ಒಂದೆರಡು ಬೈಗುಳಾನೂ ಇರುತ್ತೆ. ನಾನು ತುಂಬಾ ಸಲ ಯೋಚನೆ ಮಾಡಿದ್ದೇನೆ, ಇದು ಹೆಚ್ಚು ಹೆಚ್ಚು ಮಾರಾಟ ಆಗಬೇಕು ನನ್ನ ಅಮ್ಮನ ಮುಂದೆ ಇಟ್ಟಿರುವ ಅಷ್ಟು ವಸ್ತುಗಳು ಖಾಲಿಯಾಗಿ ಬಿಡಬೇಕು, ನನ್ನಮ್ಮನ ಕೈಯಲ್ಲಿ ತುಂಬಾ ದುಡ್ಡು ಬರಬೇಕು ಅಪ್ಪನಿಗೆ ಖುಷಿಯಾಗಬೇಕು. ಅದನ್ನ ಹೇಗೆ ಮಾಡೋದು ಅಂತ ಇವತ್ತಿನವರೆಗೂ ಗೊತ್ತಾಗುತ್ತಿಲ್ಲ. ಆದರೆ ನನಗೊಂದು ನಂಬಿಕೆ ಇದೆ ನಾನು ದೊಡ್ಡವನಾದ ಮೇಲೆ ಏನಾದರೂ ಬದಲಾವಣೆ ಬರಬೇಕು, ಅಮ್ಮ ತುಂಬಾ ಬಿಸಿಲಲ್ಲಿ ನಿಂತಿದ್ದಾರೆ ಅವರಿಗಿನ್ನು ನೆರಳು ಇರಬೇಕು, ಅವರಿಗೊಂದಿಷ್ಟು ತಂಪಾಗಬೇಕು, ಮನಸ್ಸಿಗೂ ದೇಹಕ್ಕೂ ಮತ್ತು ಹೊಟ್ಟೆಗೂ. ಅದಕ್ಕಾಗಿ ದಿನಗಳನ್ನ ಕಾಯ್ತಾ ಇದ್ದೇನೆ. ಆ ಪುಟ್ಟ ಮಗುವಿನ ಕಣ್ಣುಗಳು ಹೀಗೆ ಮಾತನಾಡುತ್ತಿದ್ದಾವೆನೋ ಅನ್ನಿಸ್ತು ದಾರಿ ಬದಿಯಲ್ಲಿ ಕುಳಿತ ಕತ್ತಿ ಮಾರುವ ಕುಟುಂಬವನ್ನು ಕಂಡಾಗ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ