ಸ್ಟೇಟಸ್ ಕತೆಗಳು (ಭಾಗ ೯೧೧)- ಒಳಿತು

ಸ್ಟೇಟಸ್ ಕತೆಗಳು (ಭಾಗ ೯೧೧)- ಒಳಿತು

ನಮ್ಮನೆ ರೇಡಿಯೋದಲ್ಲಿ ಪ್ರತಿದಿನ ಕೇಳಿ ಬರ್ತಾ ಇದ್ದ ಹಾಡು ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು. ಪ್ರತಿದಿನವೂ ಅದನ್ನೇ ಕೇಳ್ತಾ ಇದ್ದವನಿಗೆ ಮನಸ್ಸಿನಲ್ಲಿ ಒಂದು ಧೈರ್ಯ. ಮನಸ್ಸಿನ ಎಲ್ಲಾ ಆಸೆಗಳನ್ನು ಭಗವಂತ ಈಡೇರಿಸುತ್ತಾನೆ, ಸ್ವಚ್ಛ ಮನಸ್ಸಿನಲ್ಲಿ ಕೇಳುವ ಭಕ್ತಿಯೊಂದಿದ್ದರೆ ಸಾಕು. ಅದು ಅರಿವಿಗೆ ಬರುವುದಕ್ಕೆ ಹಲವಾರು ಸಮಯಾನೇ ಬೇಕಾಯಿತು.  ಮನಸ್ಸಿನ ಆಸೆಗಳನ್ನೆಲ್ಲ ಗಂಟು ಕಟ್ಟಿಕೊಂಡು ಹಾಗೆ ದಿನಗಳಿಗೆ ಕಾಯುತ್ತಿದ್ದೆ. ಹದವಾಗದ ನೆಲದ ಮೇಲೆ ಬೀಜವನ್ನೆಷ್ಟೇ ಹಾಕಿದರು ಅದು ಫಸಲು ಕೊಡುವುದು ಕಡಿಮೆ. ಹಾಗಾಗಿ ಹದವಾಗುವವರೆಗೂ ಕಾಯಬೇಕು. ತಿಳಿದುಕೊಂಡು ಬೀಜವನ್ನು ಹಾಕಿದಾಗ ಅದು ಮರವಾಗಿ ನಿಲ್ಲುವವರೆಗೂ ನೆಲ ಅದರೊಂದಿಗೆ ಬದುಕುತ್ತದೆ. ಹಾಗೆಯೇ ಮನಸ್ಸಿನ ಆಸೆಗಳನ್ನು ವ್ಯಕ್ತಪಡಿಸುವಾಗ ಕಾಲಕ್ಕೆ ಕಾಯಬೇಕಾಗುತ್ತದೆ. ಹಾಗೆ ಕಾದಾಗ ಮಾತ್ರ ಭಗವಂತನು ನಮ್ಮ ಆಸೆಗಳೊಂದಿಗೆ ಜೊತೆಯಾಗಿರುತ್ತಾನೆ. ಅವನ ಪುಸ್ತಕದಲ್ಲೂ ಒಂದಷ್ಟು ನಿರ್ಣಯಗಳಿವೆ. ಈ ವ್ಯಕ್ತಿಯ ಜೀವನದಲ್ಲಿ ಇಂತಹ ಘಟನೆಗಳು ಈ ಸಮಯದಲ್ಲೇ ಘಟಿಸಬೇಕು ಅಂತ ಹಾಗಾಗಿ ಕಾಯುವುದನ್ನು ಬಿಟ್ಟು  ಬೇರೇನು ನಮ್ಮ ಕೈಯಲ್ಲಿದೆ. ಎಲ್ಲರಿಗೂ ಒಳಿತು ಆಗ್ತದೆ ಖಂಡಿತವಾಗಿಯೂ.  ಈ ದಿನ ಹಾಕಿದ ಬೀಜಕ್ಕೆ ಇಂದೇ ಮರವಾಗಿ ಫಲ ಕೊಡುವುದಕ್ಕೆ ಸಾಧ್ಯವಿಲ್ಲವಲ್ಲ. ಹಾಗಾಗಿ ನಮ್ಮ ಕೆಲಸ ನೀರು ಗೊಬ್ಬರಗಳನ್ನ ಹಾಕಿ ಗಿಡವನ್ನು ಮರವಾಗಿಸೋದು, ಹಣ್ಣು ಬಿಡುವುದು ಮರಕ್ಕೆ ಬಿಟ್ಟಿರೋದು.ಹಾಗೆಯೇ ಭಗವಂತ ನಮಗೆ ಒಳಿತನ್ನು ಮಾಡುವವನಿದ್ದಾನೆ ನಾವು ಕಾಯುತ್ತಿರಬೇಕಷ್ಟೇ. ಈ ವಿಚಾರ ನನ್ನ ಮನಸ್ಸಿನೊಳಗೆ ಇಳಿದು ಅರ್ಥವಾಗುವುದಕ್ಕೆ ಇಷ್ಟು ಸಮಯ ಬೇಕಾಯಿತು ಅನ್ನೋದೇ ವಿಪರ್ಯಾಸ. ಹಾಗಾಗಿ ಮನಸಿಗನ್ನಿಸಿದ್ದನ್ನ ದಾಟಿಸಿದ್ದೇನೆ... ಒಳಿತು ದಾಟುತ್ತಿರಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ