ಸ್ಟೇಟಸ್ ಕತೆಗಳು (ಭಾಗ ೯೧೬)- ನೋಟ
ಹೆಜ್ಜೆಗಳನ್ನ ಗಮನಿಸ್ತಾ ಇದ್ದಾನೆ, ತಾಳಕ್ಕೆ ತಕ್ಕ ಹಾಗೆ ಕುಣಿಯುವ ತನ್ನಪ್ಪನ ಹೆಜ್ಜೆಗಳನ್ನ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದಾನೆ. ಮುಂದೊಂದು ದಿನ ತಾನು ಅದನ್ನ ಕಲಿಯಬೇಕು, ಅಪ್ಪ ಹಾಕಿದ ಬಟ್ಟೆಗಳನ್ನ ,ಅದರ ಬಣ್ಣದ ಚಿತ್ತಾರಗಳನ್ನ, ಆತನ ಉಸರಿನ ಏರಿಳಿತಗಳನ್ನ, ಕುಣಿತದ ದೇಹ ಶೈಲಿಯನ್ನ, ಭಾಷೆಯ ಸೊಗಡನ್ನ, ಆತ ಹೇಳುವ ಕಥೆಯನ್ನ, ಊರ ಜನರು ಆತನ ಬಗ್ಗೆ ಇಟ್ಟಿರುವ ನಂಬಿಕೆಯನ್ನು, ಎಲ್ಲವನ್ನು ಪ್ರೀತಿಯಿಂದ ಆಶ್ಚರ್ಯದಿಂದ ನೋಡುತ್ತಲಿದ್ದಾನೆ. ಕಾಲಗಳು ಉರುಳಿದ ಹಾಗೆ ಮುಂದೊಂದು ದಿನ ಆ ಸ್ಥಳವು ತನ್ನದಾಗುತ್ತದೆ. ತಾನು ಜನರ ಮಧ್ಯದಲ್ಲಿ ನಿಂತು ಅವರಿಗೆ ಅಭಯ ನೀಡಬೇಕು. ಅವರಿಗೆ ಧೈರ್ಯ ತುಂಬಬೇಕು, ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ದೇಹವನ್ನು ದಂಡಿಸುತ್ತಾ ದೇವರನ್ನು ತನ್ನೊಳಗೆ ಇಳಿಸಿಕೊಂಡು ಸತ್ಯವನ್ನು ನುಡಿಯಬೇಕು. ಅದಕ್ಕೆ ಆಶ್ಚರ್ಯದಿಂದ ಭಕ್ತಿಯಿಂದ ತನ್ನಪ್ಪನನ್ನೇ ಗಮನಿಸುತ್ತಿದ್ದಾನೆ. ಸುತ್ತ ಸೇರಿದ ಎಲ್ಲರ ಕಣ್ಣುಗಳಲ್ಲೂ ಭಕ್ತಿಯೊಂದೇ ಕಾಣುತ್ತಿದೆ. ಅದೇ ಭಕ್ತಿಯಿಂದ ಕಣ್ಮುಚ್ಚಿ ದೇವರನ್ನು ಕೇಳಿಕೊಂಡಿದ್ದಾನೆ. ನಿನ್ನ ಸೇವೆಗೆ ನನಗೊಂದು ಅವಕಾಶ ನೀಡು. ನನ್ನಪ್ಪನಂತೆ ನಾನು ನಿನ್ನವನಾಗಬೇಕು ಅಂತ. ದೇವರು ಪ್ರೀತಿಯಿಂದ ತಥಾಸ್ತು ಹೇಳಿದರು. ಮುಂದಿನ ಕೆಲವು ವರ್ಷಗಳ ನಂತರ ಆತ ನಮ್ಮೂರಿನ ದೈವದ ಕೋಲ ಕಟ್ಟುವುದಕ್ಕೆ ಅಣಿಯಾಗಬೇಕು ಅನ್ನುವ ತೀರ್ಪು ಸಿಕ್ಕಿತು....ಆತ ಕೈ ಮುಗಿದು ದೇವರ ದ್ಯಾನಿಸುತ್ತಲೇ ಇದ್ದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ