ಸ್ಟೇಟಸ್ ಕತೆಗಳು (ಭಾಗ ೯೧೮)- ದೊಡ್ಡವ

ಸ್ಟೇಟಸ್ ಕತೆಗಳು (ಭಾಗ ೯೧೮)- ದೊಡ್ಡವ

ಅವನು ಬೃಹದಾಕಾರದ ವ್ಯಕ್ತಿ. ದೊಡ್ಡ ದೊಡ್ದ ಬೆರಳುಗಳು, ದೊಡ್ಡದಾದ ತಲೆ, ನಾನವನ ಬಳಿ ನಿಂತರೆ ಆತನ ಮೊಣಕಾಲಿನ ಬಳಿಗೆ ಬರುತ್ತೇನೆ. ಜನ ಸೇರುವಲ್ಲಿಗೆ ಆತ ಬಂದೇ ಬರ್ತಾನೆ. ಆದರೆ ನಿಜ ವಿಷಯ ಏನು ಗೊತ್ತಾ ಆತನಿಗೆ ಸ್ವಂತವಾಗಿ ನಡೆದಾಡುವುದಕ್ಕೆ ಸಾಧ್ಯನೇ ಇಲ್ಲ. ಯಾರೋ ಅವನೊಳಗೆ ನಿಂತು ಆತನನ್ನು ನಡೆಸಬೇಕು. ಆತ ನಡೆಯುತ್ತಾ ಹೋಗುವಾಗ ಒಳಗೆ ನಿಂತವನನ್ನ ಯಾರೂ ನೋಡುವುದಿಲ್ಲ. ಎಲ್ಲರೂ ಆತನನ್ನು ಆಶ್ಚರ್ಯದಿಂದ ನೋಡಿ ಆತನ ಭಾವಚಿತ್ರವನ್ನು ಕ್ಲಿಕ್ಕಿಸಿ ಆತನನ್ನು ಹೊಗಳುತ್ತಾರೆ. ಸಣ್ಣ ಸಣ್ಣ ಮಕ್ಕಳು ಆತನನ್ನು ನೋಡಿ ಸಂಭ್ರಮ ಪಡುತ್ತಾರೆ. ಹಾಗಾಗಿ, ಜಾತ್ರೆ ಮೆರವಣಿಗೆಗೆ ಅವನು ಹಾಜರು. ಕಾರ್ಯಕ್ರಮ ಬಿಟ್ಟು ತೆರಳುವಾಗ ಒಂದಷ್ಟು ಒಳ್ಳೆಯ ಮಾತನ್ನು ಬಿಟ್ಟುಹೋಗಿದ್ದಾನೆ. “ನೋಡಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕಷ್ಟಗಳು ತೆಗೆದುಕೊಂಡು ವಿಪರೀತ ಸಂಭ್ರಮ ಪಡುವುದು ವಿಪರೀತ ದುಃಖ ಪಡುವುದು ಒಳ್ಳೆಯದಲ್ಲ. ಎಲ್ಲವನ್ನು ಸ್ವೀಕರಿಸಿ ಹಾಗೆ ನೇರವಾಗಿ ನಡೆದು ಬಿಡಿ. ನಮ್ಮೊಳಗೆ ನಿಂತು ನಮ್ಮನೊಬ್ಬ ನಡೆಸ್ತಾ ಇರುತ್ತಾನೆ ಆತ ಹೇಳಿದ ದಾರಿಯಲ್ಲಿ ನೇರವಾಗಿ ಹೋದರೆ ನಮ್ಮನ್ನು ನೋಡಿದವರಿಗೂ ಸಂಭ್ರಮ. ಹೀಗೆಂದವ ಜಾತ್ರೆ ಮುಗಿಸಿ ಕೂಡಲೇ ಯಾವುದೋ  ಒಂದು ಮೂಲೆಯಲ್ಲಿ ನಿಂತುಬಿಟ್ಟಿದ್ದಾನೆ. ಇನ್ನಾತನ ಒಳಿತಿನ ಮಾತಿಗೆ ಇನ್ನೊಂದು ಜಾತ್ರೆಗೆ ಕಾಯಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ