ಸ್ಟೇಟಸ್ ಕತೆಗಳು (ಭಾಗ ೯೧೯)- ನಾಲಗೆ
ಆ ನಾಲಗೆಯೊಂದು ಸ್ವಚ್ಛವಾಗಬೇಕು ಅಂತ ಬಯಸ್ತಾ ಇತ್ತು. ಕಾರಣ ಇಷ್ಟೇ ಬೇರೆ ಬೇರೆ ರೀತಿಯ ಒಗರು ಕಹಿ ಎಲ್ಲ ರಸಗಳನ್ನ ಆಸ್ವಾದಿಸಿ ಮನಸ್ಸಿಗೆ ಸಂದೇಶ ರವಾನಿಸ್ತಾ ಇದ್ದಂತಹ ನಾಲಿಗೆ ಇತ್ತೀಚಿನಿಂದ ಒಂದಷ್ಟು ಹೊಸ ಹೊಸ ವಿಚಾರಗಳನ್ನು ಮಾತನಾಡುವುದಕ್ಕೆ ಪ್ರಾರಂಭ ಮಾಡಿದೆ, ಆದರೆ ಈಗ ಒಂದಿಷ್ಟು ದಿನಗಳಿಂದ ನೋಡಿದ್ದು ಕಂಡದ್ದನ್ನು ಬಿಟ್ಟು ತನಗೆ ತಿಳಿಯದೆ ಇರುವ ವಿಷಯಗಳನ್ನು ಇನ್ನೊಂದಷ್ಟು ಕಲಸು ಮೇಲೋಗರ ಮಾಡಿ ಎದುರುಗಡೆ ದಾಟಿಸುತ್ತಿದೆ. ಒಳ್ಳೆಯವರನ್ನು ಕೆಟ್ಟವರನ್ನಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ರೂಪಕಗಳನ್ನು ಜೋಡಿಸಿ ಚಾರಿತ್ರಗಳನ್ನ ಹರಣ ಮಾಡಿ ಹಲವರ ನೋವಿಗೆ ಕಾರಣವಾಗಿ ಇನ್ನೊಂದಷ್ಟು ವಿಜ್ರಂಬಿಸುತ್ತಿದೆ. ನಾಲಗೆಯ ಹೊರಳುವಿಕೆಗೆ ಕೇಳುವ ಕಿವಿಗಳು ಹೆಚ್ಚಾದಾಗ ಕಾತುರತೆಯ ಕಣ್ಣುಗಳು ಹತ್ತಿರ ಬಂದಾಗ ತಾನು ಮಾಡಿದ್ದೆ ಸರಿ ಎನ್ನುವ ಭ್ರಮೆಯಲ್ಲಿ ಇನ್ನೊಂದಷ್ಟು ಹೊಸ ಅಲಂಕಾರಗಳನ್ನು ಸೃಷ್ಟಿಸಿ ವ್ಯಕ್ತಿತ್ವಗಳ ನಾಶಕ್ಕೆ ಕಾರಣವಾಗ್ತಾ ಇದೆ. ಆ ನಾಲಗೆಗೆ ಗೊತ್ತಿಲ್ಲ, ವ್ಯಕ್ತಿಯೊಬ್ಬನನ್ನ ಅರ್ಥಮಾಡಿಕೊಳ್ಳಬೇಕಾದರೆ ಆತನ ನಾಲಿಗೆಯ ನುಡಿಯುವಿಕೆಯ ಸ್ವರಗಳನ್ನು ಕೇಳಿ ನೋಡು ಅಲ್ಲಿ ಆತನ ಸಂಪೂರ್ಣ ಜೀವನ ಚರಿತ್ರೆ ಕಣ್ಣಮುಂದಿರುತ್ತದೆ ಅಂತ. ಆ ಕ್ಷಣಕ್ಕೆ ನಾಲಿಗೆಗೆ ಅದ್ಭುತ ಅನಿಸಿಕೊಬೇಕು ಅದಕ್ಕಾಗಿ ಹಲವರನ್ನು ನಾಲಿಗೆಯ ಮೂಲಕ ತುಳಿದು ತಾನು ಎತ್ತರದ ಸಿಂಹಾಸನವನ್ನೇರುವ ಯೋಚನೆ ಮಾಡುತ್ತಿದ್ದಾನೆ. ಅದಕ್ಕೆ ನಾನು ಹೇಳಿದ್ದು ನಾಲಿಗೆಯನ್ನು ಉಜ್ಜಿ ಸ್ವಚ್ಛಗೊಳಿಸುವವರು ಬೇಕಾಗಿದ್ದಾರೆ ಅಂತ. ನಿಮಗೇನಾದರೂ ದಾರಿ ಗೊತ್ತಿದ್ರೆ ಹೇಳಿ ನನ್ನ ನಾಲಗೆ ದಾರಿ ತಪ್ಪುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ