ಸ್ಟೇಟಸ್ ಕತೆಗಳು (ಭಾಗ ೯೨೩)- ಬದಲಾವಣೆ

ಸ್ಟೇಟಸ್ ಕತೆಗಳು (ಭಾಗ ೯೨೩)- ಬದಲಾವಣೆ

ವಯಸ್ಸು ಹೆಚ್ಚಾಗ್ತಾ ಹೋದ ಹಾಗೆ ಕಿವಿ ಹಾಗೂ ಮನಸ್ಸಿಗೆ ಹೊಸ ಹೊಸತು ರುಚಿಸುತ್ತದೆ ಎಂದುಕೊಳ್ಳುತ್ತೇನೆ. ಸಣ್ಣ ವಯಸ್ಸಿನಲ್ಲಿ ಯಾವುದೆಲ್ಲ ಪ್ರಿಯವಾಗ್ತಾ ಇದೆಯೋ ಅದೀಗ ಆಪ್ತವಾಗ್ತಾ ಇಲ್ಲ. ನನ್ನದು ಅನ್ನಿಸ್ತಾ ಇಲ್ಲ. ಅಂದು ಅಮ್ಮ ಹಾಡುತ್ತಿದ್ದ ಜೋಗುಳದಲ್ಲಿ ರಾಗ, ತಾಳ, ಲಯ ಯಾವುದೂ ಇಲ್ಲದಿದ್ದರೂ ಅವರು ಹಾಡುವ ಜೋಗುಳ ನನಗೆ ನಿದ್ದೆಯನ್ನು ಹತ್ತಿರದಲ್ಲೇ ತಂದು ಮಲಗಿಸಿ ಬಿಡುತ್ತಿತ್ತು. ಅವರ ಮುದ್ದು ಮುಖವನ್ನು ನೋಡೋಣ ಅಂತನ್ನಿಸುತ್ತಿತ್ತು. ಅಪ್ಪನ ಸ್ವರ ಕೇಳಿದ ಹಾಗೆ ಮನಸ್ಸಿಗೊಂದು ಧೈರ್ಯ ಬರ್ತಾ ಇತ್ತು. ಸದ್ಯಕ್ಕೆ ಶಾಲೆ ಒಳಗೆ ಹೋದೆ ಒಂದಷ್ಟು ಹೊಸ ವಿಚಾರಗಳನ್ನು ತಿಳಿದುಕೊಂಡೆ. ಸಮಾಜದ ನಡುವೆ ಬೆರೆತೆ ದೊಡ್ಡ ವೇದಿಕೆಗಳನ್ನೇರಿದೆ. ನಾನೀಗ ದೊಡ್ಡವನಾದೆ ಅಂತ ನಾನೊಂದುಕೊಂಡಿದ್ದೇನೆ.ಈಗೀಗ ನನ್ನ ಸುತ್ತಮುತ್ತಲಲ್ಲಿ ಕೆಲವರ ಮಾತು ಮಾತ್ರ ಮನಸ್ಸಿಗೆ ರುಚಿಸುತ್ತೆ.   ತೊಟ್ಟಿಲಲ್ಲಿ ಮಲಗಿದ್ದಾಗ ಅಮ್ಮನ ಹಾಡು ಲಾಲಿ ಹಾಡಾಗಿತ್ತು. ಆದರೆ ಈಗ ಅಮ್ಮನ ಮಾತು ನಿದ್ದೆಯಿಂದ ಎಬ್ಬಿಸುವ ಹಾಗಿದೆ, ಕರ್ಕಶವಾಗ್ತಿದೆ. ಕೇಳಬೇಕು ಅನ್ನಿಸ್ತಾ ಇಲ್ಲ. ಅಮ್ಮನ ರಾಗ ಸ್ವರ ಲಯದಲ್ಲಿ ಬದಲಾವಣೆಯಾಗಿಲ್ಲ ಹಾಗಾದ್ರೆ ಬದಲಾವಣೆ ಆಗಿರೋದು ನನ್ನಲ್ಲಿ ಎಂದುಕೊಳ್ಳುತ್ತೇನೆ. ನಾನು ಬದಲಾಗಬೇಕೇನೋ. ನಾನು ಬದಲಾದರೆ ನನ್ನ ಅಮ್ಮನ ಮಾತುಗಳೆಲ್ಲವೂ ಈಗಲೂ ಲಾಲಿ ಹಾಡು ಆಗುತ್ತೆ ನನ್ನ ಅಪ್ಪನ ಮಾತು ಧೈರ್ಯ ತುಂಬುತ್ತೆ ನೀವೇನಂತಿರಿ...?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ