ಸ್ಟೇಟಸ್ ಕತೆಗಳು (ಭಾಗ ೯೨೬)- ತಿಳಿಸುವಿರಾ?

ಸ್ಟೇಟಸ್ ಕತೆಗಳು (ಭಾಗ ೯೨೬)- ತಿಳಿಸುವಿರಾ?

ಆ ಮನೆಯ ಗೋಡೆಯಲ್ಲೊಂದು ಭಾವಚಿತ್ರವನ್ನು ನೇತು ಹಾಕಲಾಗಿದೆ. ಅದೊಂದು ಗುಂಪಾಗಿ ತೆಗೆದ ಚಿತ್ರ. ಎಲ್ಲರ ಮುಖದಲ್ಲಿ ನಗು ಸಂಚರಿಸುತ್ತಿದೆ.ಕಣ್ಣುಗಳು ಮಿನುಗುತ್ತಿವೆ. ಉತ್ಸಾಹವೇ ಅವರ ಜೀವನದ ಪರಮ ದ್ಯೇಯವಾಗಿರುವ  ಚಿತ್ರ ಗೋಡೆಯಲ್ಲಿ ನಮ್ಮನ್ನೇ ನೋಡುತ್ತಿದೆ. ಆ ಚಿತ್ರವನ್ನು ನೋಡಿ ಆ ಮನೆಯನ್ನು ಗಮನಿಸಿದರೆ ನಿಮಗಲ್ಲೊಂದು ಆಶ್ಚರ್ಯ ಕಾದಿರುತ್ತೆ. ಯಾಕೆಂದರೆ ಆ ಮನೆಯಲ್ಲಿ ಯಾರೂ ಕೂಡ ನಗುವನ್ನು ಹಂಚುವವರಿಲ್ಲ. ಎಲ್ಲರ ಮುಖಗಳು ಗಂಟು ಕಟ್ಟಿಕೊಂಡಿದೆ. ಕಣ್ಣುಗಳಲ್ಲಿ ನೋವೇ ತುಂಬಿದೆ. ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡು ಬದುಕೇ ಬೇಡವೆನ್ನುವಷ್ಟು ಜಿಗುಪ್ಸೆಯನ್ನ ಹೊಂದಿಕೊಂಡು ಬದುಕುತ್ತಿದ್ದಾರೆ. ಸಮಸ್ಯೆಗಳು ಜೀವನವೇ ಮುಗಿದು ಹೋಗುತ್ತಿದೆ ಅನ್ನುವಷ್ಟು ದೊಡ್ಡದೇನಲ್ಲ. ದೈನಂದಿನದ ಜೀವನದಲ್ಲಿ ಆಗುವ ಒಂದೆರಡು ಘಟನೆಗಳು ಒಂದಲ್ಲ ಒಂದು ದಿನ ಪರಿಹಾರ ಆಗುತ್ತೆ ಅನ್ನುವಂತದ್ದೇ ಸಮಸ್ಯೆಗಳು ಆದರೂ ಅದೆಲ್ಲವನ್ನು ಮನಸ್ಸಿನೊಳಗೆ ತೆಗೆದುಕೊಂಡು ನಗುವುದನ್ನು ಮರೆತುಬಿಟ್ಟಿದ್ದಾರೆ. ಅವರ ನೋವಿನ ಮುಖವನ್ನು ನೋಡುತ್ತಾ ಸುತ್ತಮುತ್ತ ಹಾದು ಹೋಗುವವರೆಲ್ಲರೂ ಕೂಡ ಅವರಂಥಾಗುತ್ತಿದ್ದಾರೆ. ಅವರ ಮನೆಯೊಳಗೆ ಬಂದು ಹೋದ ಪ್ರತಿಯೊಬ್ಬರಿಗೂ ಜೀವನ ಕಷ್ಟ ಅನಿಸುವುದ್ದಕ್ಕೆ ಆರಂಭವಾಗಿದೆ. ಬದುಕು ಬೇಡ ಅನ್ನಿಸ್ತಾ ಇದೆ. ಇವರಿಗೆ ಎಷ್ಟೇ ಬುದ್ಧಿ ಹೇಳಿದರು ಇವರದನ್ನ ಕೇಳುವುದಕ್ಕೆ ತಯಾರಿಲ್ಲ. ಬದುಕು ಸುಂದರ ಬಂದದ್ದನ್ನ ಅನುಭವಿಸಿ ಅಂತಂದ್ರೂ ಕೂಡ ಒಂದು ಸಲ ತಲೆ ಅಲ್ಲಾಡಿಸಿ ಮತ್ತೆ ಚಿಂತೆಯಲ್ಲಿ ಮುಳುಗಿಬಿಟ್ಟಿದ್ದಾರೆ. ನಮಗಂತೂ ಹೇಳಿ ಸಾಕಾಗಿದೆ ನೀವಾದರೂ ಅವರಿಗೊಂದಿಷ್ಟು ಬದುಕಿನ ಸಂಭ್ರಮದ ಕ್ಷಣಗಳ ಕಾತುರತೆಯ ವಿಷಯಗಳು ದಾಟಿಸಿಬಿಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ