ಸ್ಟೇಟಸ್ ಕತೆಗಳು (ಭಾಗ ೯೨೮)- ಭಾಷೆ
ಅವರ ಮಾತು ನನಗರ್ಥವಾಗಲಿಲ್ಲ. ಯಾಕೆಂದರೆ ಆ ನಾಲ್ಕು ಜನರ ಪರಿಚಯ ಇದೆ ಹೊರತು ಅವರ ಭಾಷೆ ತಿಳಿದವನಲ್ಲ. ಅವರು ನನ್ನ ದಿನಚರಿಯ ಭಾಗವಾಗಿದ್ದಾರೆ. ಪ್ರತಿದಿನವೂ ಅವರನ್ನ ನೋಡಿಯೇ ನನ್ನ ದಿನ ಆರಂಭವಾಗುವುದು. ಹೀಗೆ ದಿನಗಳು ಉರುಳಿದವು. ಕೆಲವೊಂದು ದಿನ ಭೇಟಿ ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಒಂದಷ್ಟು ಕಾಳುಗಳನ್ನ ಹಾಕಿ ಅವರ ಹೊಟ್ಟೆ ತುಂಬಿಸೋದಕ್ಕೆ ಸಹಾಯ ಮಾಡ್ತಾ ಇದ್ದೆ. ಆದರೆ ಕೆಲವು ದಿನಗಳಿಂದ ಅವರು ಕಾಣಲೇ ಇಲ್ಲ. ಹುಡುಕುವುದ್ದಕ್ಕೆ ತುಂಬಾ ಪ್ರಯತ್ನ ಪಟ್ಟರೂ ದಾರಿ ಯಾವುದು ಅಂತ ಗೊತ್ತಾಗದೆ ಸುಮ್ಮನಾಗಿ ಬಿಟ್ಟಿದ್ದೆ. ಹೇಗೂ ಸಮಯವಿದೆಯಲ್ಲ ಅಂದುಕೊಂಡು ಮನೆ ಅಂಗಳದಲ್ಲಿ, ಕುಡಿಯುವುದಕ್ಕೆ ಉಪಯೋಗ ಆಗಲಿ ಅನ್ನುವ ಕಾರಣಕ್ಕೆ ಸಣ್ಣದಾದ ಪಾತ್ರೆಯೊಳಗೆ ನೀರೊಂದಷ್ಟನ್ನ ತುಂಬಿಸಿಟ್ಟಿದ್ದೆ .ಮರುದಿನ ಬೆಳಗ್ಗೆ ಅವರು ಮಾತನಾಡುವ ಶಬ್ದ ಕೇಳಿಸಿತು. ಹತ್ರ ಹೋದಾಗ ಆ ನೀರಿನೊಳಗೆ ಬಿದ್ದು ಸಂಭ್ರಮ ಪಡುತ್ತಿದ್ದರು. ಒಬ್ಬರಿಗೊಬ್ಬರು ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದರು. ನನ್ನನ್ನು ನೋಡಿ ಏನೋ ಹೇಳಿದ್ರು, ನನ್ನ ಪ್ರಕಾರ ಅದು ಅವರ ಧನ್ಯವಾದ ಅಂದುಕೊಳ್ಳುತ್ತೇನೆ. ಆ ಧನ್ಯವಾದದ್ದಲ್ಲಿ ಎಷ್ಟು ಪ್ರೀತಿ ಇತ್ತು ಅನ್ನೋದು ಮಾತ್ರ ನನಗೆ ಅರ್ಥ ಆಗ್ಲಿಲ್ಲ. ಯಾಕೆಂದರೆ ನನಗೆ ಆ ನಾಲ್ಕು ಹಕ್ಕಿಗಳ ಭಾಷೆ ತಿಳಿದಿರಲಿಲ್ಲ. ಅವರ ಭಾಷೆ ನನಗೆ ಸರಿಯಾಗಿ ತಿಳಿದಿರುತ್ತಿದ್ದರೆ ನಾನು ಮಾಡುವ ಒಂದಷ್ಟು ತಪ್ಪುಗಳನ್ನು ಅವರು ತಿಳಿಸಿ ಹೇಳ್ತಾ ಇದ್ರು. ನಾವು ನಮ್ಮ ಸುತ್ತ ಮುತ್ತಲಿನ ಪ್ರಾಣಿ ಪಕ್ಷಿಗಳ ಭಾಷೆಯನ್ನು ನಾವು ಅರ್ಥ ಮಾಡಿಕೊಂಡರೆ ನಾವು ಇನ್ನೊಂದಷ್ಟು ಒಳ್ಳೆಯವರಾಗ್ತಾ ಇದ್ವಿ. ನೀವೇನು ಅಂತೀರಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ