ಸ್ಟೇಟಸ್ ಕತೆಗಳು (ಭಾಗ ೯೩೧)- ಕದ್ದ ನೋಟ

ಸ್ಟೇಟಸ್ ಕತೆಗಳು (ಭಾಗ ೯೩೧)- ಕದ್ದ ನೋಟ

ಮುಖವನ್ನ ನಾಲ್ಕು ಸಲ ಸೋಪು ಹಾಕಿ ತಿಕ್ಕಿಕೊಂಡಿದ್ದೇನೆ. ಮೂರು ಬಗೆಯ ಫೇಸ್ ವಾಶ್ ಬಳಸಿದ್ದೇನೆ, ಇವೆಲ್ಲವನ್ನೂ ಹಾಕಿಕೊಳ್ಳುವುದಕ್ಕೆ ಕಾರಣವೂ ಇದೆ. ಇವತ್ತು ಬೆಳಗ್ಗೆ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಾ ಇದ್ದೆ. ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಮೂರು ಹುಡುಗಿಯರಲ್ಲಿ ಒಬ್ಬಳು ನನ್ನನ್ನ ಗಮನಿಸ್ತಾ ಇದ್ದಳು. ನಾನು  ಮೊದಲಷ್ಟು ಗಮನಿಸಿರಲಿಲ್ಲ. ಅರ್ಧ ಪಲಾವು ತಿಂದು ಇನ್ನೊಂದಷ್ಟನ್ನ ಬಾಯಿಗೆ ಇಳಿಸುವಷ್ಟರಲ್ಲಿ ಹಾಗೆ ತಲೆ ಎತ್ತಿದ್ದೆ. ಆಗ ಅವಳ ಕಣ್ಣು ನನ್ನ ಕಣ್ಣನ್ನೇ ನೋಡ್ತಾ ಇತ್ತು. ಆಗ ನನಗನ್ನಿಸ್ತು ನನ್ನನ್ನು ಯಾರೋ ಕದ್ದು ನೋಡ್ತಾರೆ ಅಂದ್ರೆ. ನಾನು ಚೆನ್ನಾಗಿದ್ದೇನೆ ಅಂತ ಅರ್ಥ. ಹಾಗಾದ್ರೆ ಇನ್ನೊಂದಷ್ಟು ಹೆಚ್ಚು ಜನ ನೋಡ್ಲಿ. ಆ ಕಾರಣಕ್ಕೆ ಮುಖವನ್ನು ಚಂದ ತಿಕ್ಕುತ್ತೇನೆ, ಯಾಕೆಂದರೆ ನನ್ನನ್ನು ಯಾರು ಕದ್ದು ನೋಡುತ್ತಾರಲ್ಲ. ಕೂದಲನ್ನ ಒಪ್ಪವಾಗಿ ಬಾಚಿಕೊಳ್ಳುತ್ತಿದ್ದೇನೆ ನನ್ನನ್ನು ಯಾರು ಗಮನಿಸ್ತಾರಲ್ಲ. ಒಂದಕ್ಕೊಂದು ಒಪ್ಪುವಂತಹ ಬಟ್ಟೆಗಳನ್ನೇ ಧರಿಸುತ್ತೇನೆ ನಾನು ಚಂದ ಕಾಣಬೇಕಲ್ಲ .ಹಾಗಾಗಿ ನನ್ನನ್ನ ಯಾರು ಕದ್ದು ನೋಡುತ್ತಾರೆ ಅನ್ನೋದನ್ನ ಕದ್ದು ನೋಡುವ ಹೊಸ ಅಭ್ಯಸ ಶುರುವಾಗಿದೆ. ಯಾರಾದರೂ ಕದ್ದು ನೋಡ್ತಾ ಇದ್ರೆ ಸತ್ಯವಾಗ್ಲೂ ತುಂಬಾ ಖುಷಿಯಾಗುತ್ತದೆ. ಆದರೆ ಅದನ್ನ ಎಲ್ಲಾ ಕಡೆ ತೋರಿಸಿಕೊಳ್ಳುವುದಕ್ಕಾಗುವುದಿಲ್ಲ. ಅದಕ್ಕೆ ನನ್ನ ಮುಖದಲ್ಲಿ ಈಗ ನಗುವನ್ನು ಹಾಗೆ ಉಳಿಸಿಕೊಳ್ಳುತ್ತೇನೆ. ಯಾಕೆಂದರೆ ನಗುತ್ತಿದ್ದಾಗ ನಾನು ಇನ್ನೂ ಸುಂದರವಾಗಿ ಕಾಣುತ್ತೇನೆ ಅಂತ ಅಮ್ಮ ಆಗಾಗ ಹೇಳ್ತಾ ಇದ್ರು. ಮತ್ತೊಂದು ವಿಷಯ ಗೊತ್ತಾ ನಿಮ್ಮನ್ನು ಯಾರೋ ಕದ್ದು ನೋಡ್ತಾ ಇರುತ್ತಾರೆ ಅದು ನಿಮ್ಮ ಅನುಭವಕ್ಕೆ ಬಂದ ಮೇಲೆ ಅದು ಅದ್ಭುತವಾದದ್ದು ಹಾಗಾಗಿ ಆಗಾಗ ನಗ್ತಾ ಇರಿ. ಮುಖವನ್ನು ಚಂದ ತೊಳೆದುಕೊಳ್ಳಿ ಶುಭ್ರವಾದ ಬಟ್ಟೆ ಹಾಕೊಳಿ. ನಿಮ್ಮನ್ನು ಖಂಡಿತಾ ಕದ್ದು ನೋಡ್ತಾ ಇರುತ್ತಾರೆ. ಬೇರೆಯವರು ನಿಮ್ಮನ್ನು ನೋಡ್ತಾ ಇದ್ದಾರೆ ಅನ್ನುವ ಕಾರಣಕ್ಕೆ ನೀವು ಬೇರೆಯವರನ್ನು ಕದ್ದು ನೋಡಬಾರದು ಅಂತೇನಿಲ್ಲ. ನೋಡುವುದರಲ್ಲಿ ತಪ್ಪು ಇಲ್ಲ ಕದ್ದು ನೋಡಿ ಸಿಕ್ಕಿ ಬಿಡಬಾರದು ಏನಂತೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ