ಸ್ಟೇಟಸ್ ಕತೆಗಳು (ಭಾಗ ೯೩೨)- ಉತ್ತರ
ಆ ಬಟ್ಟೆಗಳು ಅಷ್ಟೇನೂ ಬೇಸರಿಸಿಕೊಂಡಿಲ್ಲ, ನೀರು ನೋಡುವುದು ವರ್ಷಕ್ಕೊಮ್ಮೆಯಾದರೂ, ಬಿಸಿಲನ್ನ ಪ್ರತಿದಿನ ನೋಡಲೇಬೇಕು. ಇಲ್ಲವಾದರೆ ಆ ದಿನ ವೇದಿಕೆ ಏರುವುದಕ್ಕೆ ಆಗುವುದಿಲ್ಲ. ದೇಹದ ಕಸುವನ್ನೆಲ್ಲ ರಂಗದ ಮೇಲೆ ವಿವಿಧ ಕುಣಿತ ಹಾವ ಭಂಗಿಗಳ ಮೂಲಕ ಪ್ರದರ್ಶನಕ್ಕೆ ಇಟ್ಟಾಗ ಆ ಪಾತ್ರಕ್ಕೊಂದು ಗಾಂಭೀರ್ಯತೆ ನೋಡುಗನ ಕಣ್ಮನವನ್ನ ಸೆಳೆಯುವುದಕ್ಕೆ ಸಾದ್ಯವಾಗುತ್ತದೆ. ಆತನ ದೇಹದ ಬೆವರುಗಳನ್ನೆಲ್ಲ ತನ್ನೊಳಗೆ ಆವಾಯಿಸಿಕೊಂಡು ಕುಳಿತ ಜನರಿಗೆ ರಸಸ್ವಾದಗಳನ್ನ ಉಣಪಡಿಸುತ್ತದೆ. ಒಂದು ದಿನವೂ ಆ ಬಟ್ಟೆಗಳು ಬೇಸರಿಸಿಕೊಂಡಿಲ್ಲ ನಮ್ಮನ್ನು ಸರಿಯಾಗಿ ನೀರು ಹಾಕಿ ಸ್ವಚ್ಛಗೊಳಿಸುತ್ತಿಲ್ಲ ಬರಿಯ ಬೆವರಿನಿಂದ ಗಬ್ಬೆತು ನಾರುತಿದ್ದೇವೆ. ಬದಲಾವಣೆ ಬೇಕು ಅಂತ ಅವುಗಳು ಬೊಬ್ಬೆ ಹೊಡೆದಿಲ್ಲ. ಅವುಗಳ ಕಾರ್ಯವನ್ನು ನೆಮ್ಮದಿಯಿಂದ ನಿರ್ವಹಿಸುತ್ತಿವೆ. ಕೆಲವೊಂದು ಕ್ಷಣದಲ್ಲಿ ಆ ದಿನ ಯಕ್ಷಗಾನವೊಂದನ್ನ ಮುಗಿಸಿ ಮುಂದಿನ ಊರಿನ ಪಕ್ಕದ ಮೈದಾನದಲ್ಲಿ ಬಿಸಿಲಿಗೆ ತಮ್ಮ ಮೈಯನ್ನ ಒಡ್ಡಿಕೊಂಡಿವೆ ಯಕ್ಷಗಾನದ ವಿವಿಧ ರೀತಿಯ ಬಟ್ಟೆಗಳು ದಾರಿಯಲ್ಲಿ ಹಾದು ಹೋಗುವ ನೋಡುಗರಿಗೆ ಅದು ಬಣ್ಣಗಳ ಲೋಕವೇ ವಿನಹ ಪಾತ್ರಗಳು ಅಲ್ಲಿ ಪರಿಚಯವಾಗುತ್ತಿಲ್ಲ ಹಾಗೆ ದಿನದ ರಾತ್ರಿಗೆ ವೇದಿಕೆ ಏರಿದಾಗ ಬಿಸಿಲಲ್ಲಿ ಒಣಗಿದ ಬಟ್ಟೆಗಳೆಲ್ಲಾ ಸಿಂಗರಿಸಿಕೊಂಡು ಅದ್ಭುತವಾದ ಕಲಾ ಪ್ರದರ್ಶನಕ್ಕೆ ತಯಾರಾಗಿದೆ. ಆ ಬಟ್ಟೆಗಳಿಗೆ ಗೊತ್ತು ತಾವು ಯಾವ ಸಮಯದಲ್ಲಿ ಯಾವ ಕಾರ್ಯವನ್ನ ನಿರ್ವಹಿಸಬೇಕು ಅಂತ ನಾವಿದನ್ನ ಕಲಿಯೋದ್ಯಾವಾಗ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ