ಸ್ಟೇಟಸ್ ಕತೆಗಳು (ಭಾಗ ೯೩೩)- ಆಸೆಗಳು

ಸ್ಟೇಟಸ್ ಕತೆಗಳು (ಭಾಗ ೯೩೩)- ಆಸೆಗಳು

ಆ ತಂಪು ನೆಲದ ಮೇಲೆ ಬೆಳೆದ ಪುಟ್ಟ ಗಿಡಗಳ ತುದಿಯಲ್ಲಿ ಮಿನುಗುವ ಹೂವುಗಳಿಗೆಲ್ಲ ತಾವೊಂದು ಮಾಲೆಯೊಳಗೆ ಸೇರಿ ಒಬ್ಬನ ಹಾರವಾಗಬೇಕು ಅಂತ ಆಸೆ .ದುಂಬಿಗಳೆಲ್ಲ ಬಂದು ರಸವ ಹೀರುವುದರಿಂದ, ಇನ್ನೊಂದಷ್ಟು ಪ್ರಖರ ಕಾಂತಿಯಿಂದ ಹೂವುಗಳು ಬೆಳಗುತಿವೆ. ಒಬ್ಬೊಬ್ಬರು ಸೇರಿಕೊಂಡು ಸುಂದರ ರೂಪ ಧರಿಸಿ ಒಬ್ಬ ಸತ್ಪ್ರಜೆಯ ಕೊರಳಿಗೆ ಏರುವ ಆಸೆ. ಜಗತ್ತಿನಲ್ಲಿ ಸತ್ಪ್ರಜೆಗಳು ಇನ್ನೂ ಇದ್ದಾರಾ ಅಂತ ಹಾರಿ ಬರುವ ಎಲ್ಲ ದುಂಬಿಗಳಲ್ಲಿ ಕೇಳುತ್ತಿತ್ತು, ಬೀಸುವ  ಗಾಳಿಯಲ್ಲಿ ಕೇಳುತ್ತಿತ್ತು ಒಬ್ಬರದು ಒಂದೊಂದು ಉತ್ತರ.ಎಲ್ಲವನ್ನು ಅಳೆದು ತೂಗಿ ದಿನಗಳಿಗಾಗಿ ಕಾಯುತ್ತಿತ್ತು. ಮೊಗ್ಗು ಇದ್ದವರು ಹೂವಾಗಿ ಅರಳುವಷ್ಟು ಹೊತ್ತಿಗೆ ತುಡಿತವನ್ನು ತಾಳಿಕೊಳ್ಳಲಾಗುತ್ತಿಲ್ಲ. ಹೂವುಗಳೆಲ್ಲ ಅರಳಿ ನಿಂತಾಗ ಮಾಲೆಯೊಂದು ತಯಾರಾಯಿತು. ಕಣ್ಣ ಮುಂದೆ ರಾಜಕೀಯ ನಾಯಕರಿದ್ದಾರೆ, ಉತ್ತಮ ಮಾತುಗಾರರಿದ್ದಾರೆ, ಸಮಾಜ ಸೇವಕರಿದ್ದಾರೆ, ಮಕ್ಕಳ ಏಳಿಗೆಯ ಬಯಸುವ ತಾಯಿ ಇದ್ದಾಳೆ, ಕಣ್ಣೀರೊರೆಸುವ ತಂದೆ ಇದ್ದಾನೆ, ಅಣ್ಣ ತಮ್ಮಂದಿರು ಬಂದು ಬಳಗ, ಸಹಾಯ ಮಾಡುವ ಪುಟ್ಟ ಹುಡುಗ, ಕಷ್ಟಕ್ಕೆ ನಿಂತ ರಿಕ್ಷಾ ಡ್ರೈವರ್ ಹೀಗೆ ಯಾರ  ಕೊರಳಿಗೇರುವುದು ಅಂತ ಯೋಚನೆ. ಕೆಟ್ಟತನವನ್ನ ಬದಿಗೆ ಸರಿಸಿ ಅದ್ಭುತವಾದದ್ದನ್ನೇ ಹುಡುಕೋದು ಎಲ್ಲಿ ಅಂತ ಯೋಚಿಸುತ್ತಿದ್ದಾಗ, ಹೂಗಳ ಬಳಿಗೆ ಬಂದ ದಾರ ಹೇಳಿತು, "ಸಂಪೂರ್ಣ ಒಳಿತಿರುವಂತಹ ಯಾವುದೇ ವ್ಯಕ್ತಿ ನಿಮಗೆ ಸಿಗೋದಿಲ್ಲ,  ಇದ್ದದರಲ್ಲಿ ಆರಿಸಿಕೊಳ್ಳಿ, ಇಲ್ಲವಾದರೆ ಕಾಯುವಿಕೆಯ ತಪದಲ್ಲಿ ಒಣಗಿ ಹೋಗಿ ಬಿಡ್ತೀರಾ. ಯಾವುದಕ್ಕೂ ಉಪಯೋಗವಿಲ್ಲದ ಹಾಗೆ ಆದರೂ ಮಾಲೆ ಇನ್ನೂ ಕಾಯುತ್ತಿದೆ. ಮನಸ್ಸು ಪೂರ್ತಿಯಾಗಿ ಒಬ್ಬರ ಕೊರಳಿಗೆ ಏರುವುದಕ್ಕೆ... ಒಬ್ಬ ಸತ್ಪ್ರಜೆಗಾಗಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ