ಸ್ಟೇಟಸ್ ಕತೆಗಳು (ಭಾಗ ೯೩೪)- ಪ್ರಶ್ನೋತ್ತರ

ಸ್ಟೇಟಸ್ ಕತೆಗಳು (ಭಾಗ ೯೩೪)- ಪ್ರಶ್ನೋತ್ತರ

ಗಡಿಯಾರದ ಮುಳ್ಳುಗಳು ಆ ಪರಿಧಿಯ ಒಳಗಡೆ ಅದೆಷ್ಟು ಬಾರಿ ಸುತ್ತಿದೆಯೋ ಗೊತ್ತಿಲ್ಲ. ಮನೆಯಲ್ಲಿರುವ ಒಂದಷ್ಟು ಕ್ಯಾಲೆಂಡರ್ ಗಳು ಬದಲಾದರೂ ವಯಸ್ಸಿನ ಅಂತರ ಹೆಚ್ಚಾದರೂ ಕೂಡ ನಿನಗಿನ್ನು ಈ ಜಗತ್ತಿನ ಮುಖದ ಪರಿಚಯವೇ ಆಗಿಲ್ಲ ಅಂದುಕೊಳ್ಳುತ್ತೇನೆ .ಇದು ನಿನಗರ್ಥವಾಗದ ಜಗತ್ತು. ಒಂದು ಸಲ ಹಾಗಂದು ಕೊಂಡ್ರೆ ಇನ್ನೊಂದು ಸಲ ಹಾಗಿರುವುದೇ ಇಲ್ಲ. ಊರಲ್ಲಿ ಬದುಕುತ್ತಿರುವ ಮನುಷ್ಯರಿಗೆ ನೀರಿಲ್ಲದಿದ್ದರೆ ಪ್ರತಿಭಟನೆ ಆಗುತ್ತದೆ ಕಾಡಲ್ಲಿ ಪ್ರಾಣಿಗಳೆಲ್ಲ ನೀರಿಲ್ಲದೆ ಸತ್ತು ಹೋದರು ಕೂಡ ಕೇಳೋರಿಲ್ಲದೆ ಸುದ್ದಿ ಪ್ರಸಾರವೇ ಆಗುವುದಿಲ್ಲ. ದುಡ್ಡಿರುವ ವ್ಯಕ್ತಿಯ ಸಮಸ್ಯೆಗಳು ಮಾತ್ರ ನಿಜವಾದ ಕಷ್ಟ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿಯೇ ಬಿಟ್ಟಿದೆ. ಎಲ್ಲಾ ಬಿಟ್ಟುಬಿಡು, ಪ್ರತಿಯೊಬ್ಬರಿಗೂ ಅವರ ನೋವುಗಳನ್ನು ಒಂದಷ್ಟು ಕಡೆ ಹೇಳಿಕೊಳ್ಳಬೇಕು ಅನ್ನುವ ಆಸೆ ಇದ್ದೇ ಇರುತ್ತದೆ. ಹಾಗಾಗಬೇಕಾದರೆ ನಿನ್ನ ಸಮಸ್ಯೆಯನ್ನು ಒಂದಷ್ಟು ಜನ ಕೇಳಿ, ಅದಕ್ಕೊಂದಿಷ್ಟು ಪರಿಹಾರವನ್ನು ಸೂಚಿಸಬೇಕು ಅಂತ ಆದರೆ ನೀನು ದುಡ್ಡು ಮಾಡಿರಬೇಕು ಹೆಸರು ಮಾಡಿರಬೇಕು. ನಿನ್ನ ಕಿಸೆಯೊಳಗಿನ ಪರ್ಸು ಮಾತನಾಡುತ್ತದೆ ನಿನ್ನ ಹೆಸರು ಪ್ರಚಾರ ಕೊಡುತ್ತದೆ. ಎಂದರೆ ನಿನ್ನ ಕಷ್ಟಗಳೇ ಜಗತ್ತಿನ ಸಮಸ್ಯೆ ಎನ್ನುವಷ್ಟರ ಮಟ್ಟಿಗೆ ಸಮಸ್ಯೆಗಳು ಸಾಲು ಸಾಲು ಆಗಿ ಬರುತ್ತದೆ. ಹಾಗಾಗಿ ಈ ಜಗತ್ತನ್ನ ಅರ್ಥ ಮಾಡಿಕೊಳ್ಳಬೇಡ ನಿನ್ನ ಬದುಕಿನ ಪರಿಧಿಯೊಳಗೆ ಯಾವುದೆಲ್ಲ ದೊರಕಿದೆಯೋ ಎಲ್ಲವನ್ನು ಪಡೆದುಕೊಂಡು ಅನುಭವಿಸಿಕೊಂಡು ಮುಂದೆ ಸಾಗಿಬಿಡು ಹೆಚ್ಚೇನೂ ಯೋಚಿಸಬೇಡ ನಿನ್ನ ಬದುಕು ಕೊನೆಗೊಮ್ಮೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾದವನು ನೀನು. ಅರ್ಥ ಆಯ್ತಾ..?? ಜೋರು ಮಾತಿನಲ್ಲಿ ಆ ದಿನ ನನ್ನ ಗುರುಗಳು ಹೇಳಿದ ಮಾತು ಇನ್ನೂ ಕಿವಿಯೊಳಗೆ ಮತ್ತೆ ಅನುರಣಿಸುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ